ಛತ್ತೀಸ್‌ಗಢದಲ್ಲಿ ಘೋರ ಕೃತ್ಯ: ಪತ್ನಿಯ ರುಂಡ ಕಡಿದು ಊರ ತುಂಬಾ ಮೆರವಣಿಗೆ ಮಾಡಿದ ಪಾಪಿ ಪತಿ!

BeFunky collage (18)

ಮನಕುಲುಕುವ ಕ್ರೂರ ಘಟನೆಯೊಂದು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಮತ್ತು ಮದ್ಯದ ಅಮಲು ಎಷ್ಟು ವಿಕೋಪಕ್ಕೆ ಹೋಗಬಹುದು ಎಂಬುದಕ್ಕೆ ಈ ರಕ್ತಸಿಕ್ತ ಘಟನೆಯೇ ಸಾಕ್ಷಿಯಾಗಿದೆ. ಪತಿಯೊಬ್ಬ ತನ್ನ ಹೆಂಡತಿಯ ತಲೆ ಕಡಿದು, ಆ ರುಂಡದೊಂದಿಗೆ ಇಡೀ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವುದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಘಟನೆಯ ವಿವರ:

ಕೊರ್ಬಾ ಜಿಲ್ಲೆಯ ಬುಂದೇಲಿ ಗ್ರಾಮದ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಕಾವಲುಗಾರನಾಗಿದ್ದ ಸಲಿಕ್ ರಾಮ್ ಯಾದವ್ (58) ಈ ಕೃತ್ಯ ಎಸಗಿದ ಆರೋಪಿ. ಬುಧವಾರ ಸಂಜೆ ಪತ್ನಿ ಸುಮತಿ (50) ಅವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದ ಸಲಿಕ್, ಮದ್ಯದ ಅಮಲಿನಲ್ಲಿದ್ದ ಎಂದು ತಿಳಿದುಬಂದಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆತ, ಕೋಳಿ ಕತ್ತರಿಸಲು ಬಳಸುತ್ತಿದ್ದ ಹರಿತವಾದ ಆಯುಧದಿಂದ ಪತ್ನಿಯ ಕುತ್ತಿಗೆಗೆ ಬಲವಾಗಿ ಏಟು ಹಾಕಿ ಶಿರಚ್ಛೇದ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಆರೋಪಿ ಅಲ್ಲಿಗೇ ನಿಲ್ಲಲಿಲ್ಲ. ಒಂದು ಕೈಯಲ್ಲಿ ರಕ್ತಸಿಕ್ತ ಆಯುಧ, ಇನ್ನೊಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಭೀಕರ ದೃಶ್ಯವನ್ನು ಕಂಡ ಗ್ರಾಮಸ್ಥರು ಭಯಭೀತರಾಗಿ ಸ್ತಬ್ಧಗೊಂಡಿದ್ದಾರೆ. ಬಳಿಕ ತಾನೇ ಆ ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮೂಲತಃ ಅಜ್ಗರ್‌ಬಹಾರ್ ಹಲ್ದಿಮಾಡ ಗ್ರಾಮದ ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಸದ್ಯ ತಂದೆ ಜೈಲು ಪಾಲಾಗಿದ್ದು, ತಾಯಿ ಸಾವನ್ನಪ್ಪಿದ್ದಾಳೆ. ಹೆತ್ತವರ ಈ ದುರಂತ ಅಂತ್ಯದಿಂದ ನಾಲ್ಕು ಮಕ್ಕಳ ಭವಿಷ್ಯ ಈಗ ಅಂಧಕಾರಕ್ಕೆ ದೂಡಲ್ಪಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Exit mobile version