ಆನ್‌ಲೈನ್ ಡೆಲಿವರಿ ಆ್ಯಪ್‌ಗಳು ಇಂದು ಕೇವಲ ದಿನಸಿ ಸಾಮಾನುಗಳಿಗೆ ಸೀಮಿತವಾಗಿಲ್ಲ. ಜೀವನದ ಪ್ರತಿಯೊಂದು ಅಗತ್ಯಕ್ಕೂ ಜನರು ಈಗ ಕ್ವಿಕ್ ಕಾಮರ್ಸ್ ವೇದಿಕೆಗಳನ್ನು ನೆಚ್ಚಿಕೊಂಡಿದ್ದಾರೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಬಿಡುಗಡೆ ಮಾಡಿರುವ ‘ಇಯರ್ ಇನ್ ರಿವ್ಯೂ 2025’ ವರದಿಯು ಭಾರತೀಯರ ವಿಚಿತ್ರ ಮತ್ತು ಅಚ್ಚರಿಯ ಶಾಪಿಂಗ್ ಅಭ್ಯಾಸಗಳನ್ನು ಅನಾವರಣಗೊಳಿಸಿದೆ. ಐಫೋನ್‌ನಿಂದ ಹಿಡಿದು ಕರಿಬೇವಿನ ಎಲೆಯವರೆಗೆ ಎಲ್ಲವನ್ನೂ ನಿಮಿಷಗಳಲ್ಲಿ ಮನೆಬಾಗಿಲಿಗೆ ತರಿಸಿಕೊಂಡಿರುವ ಭಾರತೀಯರು ಈ ಬಾರಿ ಹೊಸ ದಾಖಲೆ ಬರೆದಿದ್ದಾರೆ.
ಈ ಬಾರಿಯ ವರದಿಯಲ್ಲಿ ಎಲ್ಲರ ಗಮನ ಸೆಳೆದಿರುವುದು ಚೆನ್ನೈನ ಒಬ್ಬ ಗ್ರಾಹಕ. ಈತ ಇಡೀ ವರ್ಷದಲ್ಲಿ ಕಾಂಡೋಮ್‌ಗಳಿಗಾಗಿ ಬರೋಬ್ಬರಿ 1,06,398 ರೂ. ಖರ್ಚು ಮಾಡಿದ್ದಾನೆ. ವರ್ಷದಲ್ಲಿ ಒಟ್ಟು 228 ಬಾರಿ ಕಾಂಡೋಮ್‌ಗಳಿಗಾಗಿ ಆರ್ಡರ್ ಮಾಡಲಾಗಿದೆ. ಅಂದರೆ ಆತ ತಿಂಗಳಿಗೆ ಸರಾಸರಿ 19 ಬಾರಿ ಇನ್‌ಸ್ಟಾಮಾರ್ಟ್ ಮೂಲಕ ಆರ್ಡರ್ ಮಾಡಿದ್ದಾನೆ. ಸ್ವಿಗ್ಗಿಯಲ್ಲಿ ಸರಾಸರಿ ಪ್ರತಿ 127 ಆರ್ಡರ್‌ಗಳಲ್ಲಿ ಒಂದು ಕಾಂಡೋಮ್ ಪ್ಯಾಕ್ ಇರುತ್ತದೆಯಂತೆ. ಇನ್ನು ಮುಂಬೈನ ಮತ್ತೊಬ್ಬ ಗ್ರಾಹಕ ‘ರೆಡ್ ಬುಲ್ ಶುಗರ್ ಫ್ರೀ’ ಪಾನೀಯಕ್ಕಾಗಿ ವರ್ಷಕ್ಕೆ 16.3 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಬೆಂಗಳೂರಿನ ಗ್ರಾಹಕರೊಬ್ಬರು ಒಂದೇ ಬಾರಿಗೆ ಮೂರು ಐಫೋನ್‌ಗಳನ್ನು ಆರ್ಡರ್ ಮಾಡಿ 4.3 ಲಕ್ಷ ರೂ. ಪಾವತಿಸಿದ್ದಾರೆ. ಇದು 2025ರ ಏಕೈಕ ಅತಿ ದೊಡ್ಡ ಮೊತ್ತದ ಆರ್ಡರ್ ಆಗಿದೆ. ಕೇವಲ ಆರ್ಡರ್ ಮಾಡುವುದಷ್ಟೇ ಅಲ್ಲ, ಡೆಲಿವರಿ ಏಜೆಂಟ್‌ಗಳಿಗೆ ಟಿಪ್ಸ್ ನೀಡುವಲ್ಲಿಯೂ ಬೆಂಗಳೂರಿಗರು ಮುಂದು. ನಗರದ ಒಬ್ಬ ನಿವಾಸಿ ವರ್ಷದಲ್ಲಿ ಒಟ್ಟು 68,600 ರೂ.ಗಳನ್ನು ಕೇವಲ ‘ಟಿಪ್ಸ್’ ನೀಡಿದ್ದಾರೆ.
ನೋಯ್ಡಾದಲ್ಲಿ ಬ್ಲೂಟೂತ್ ಸ್ಪೀಕರ್, ಎಸ್‌ಎಸ್‌ಡಿ (SSD) ಮತ್ತು ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳಿಗಾಗಿ ಒಂದೇ ಆರ್ಡರ್‌ನಲ್ಲಿ 2.69 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇತ್ತ ಚೆನ್ನೈನಲ್ಲಿ ಮತ್ತೊಬ್ಬ ಗ್ರಾಹಕ ತನ್ನ ಸಾಕುಪ್ರಾಣಿಗಳ ಮೇಲಿನ ಪ್ರೀತಿಗಾಗಿ ಆಹಾರ ಮತ್ತು ಇತರ ಸಾಮಗ್ರಿಗಳಿಗೆ ವರ್ಷಕ್ಕೆ 2.41 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಇನ್‌ಸ್ಟಾಮಾರ್ಟ್ ವರದಿ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಕಾಂಡೋಮ್‌ಗಳ ಮಾರಾಟವು ಶೇ. 24ರಷ್ಟು ಏರಿಕೆ ಕಂಡಿದೆ. ಹಾಲಿನಿಂದ ಹಿಡಿದು ಚಿನ್ನದ ನಾಣ್ಯಗಳವರೆಗೆ ಎಲ್ಲವೂ ಈಗ 10 ನಿಮಿಷಗಳಲ್ಲಿ ಡೆಲಿವರಿ ಆಗುತ್ತಿರುವುದು ಜನರ ಖರೀದಿ ಸಾಮರ್ಥ್ಯ ಮತ್ತು ವೇಗವನ್ನು ಹೆಚ್ಚಿಸಿದೆ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಈ ಅಂಕಿ-ಅಂಶಗಳು ಭಾರತೀಯರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಎಷ್ಟು ಆಳವಾಗಿ ಬಳಸುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಿವೆ. ಅಗತ್ಯ ವಸ್ತುಗಳಿಗಿಂತ ಹೆಚ್ಚಾಗಿ ಐಷಾರಾಮಿ ಮತ್ತು ತುರ್ತು ಅಗತ್ಯದ ವಸ್ತುಗಳಿಗಾಗಿ ಜನರು ಈಗ ಕ್ವಿಕ್ ಕಾಮರ್ಸ್ ಮೊರೆ ಹೋಗುತ್ತಿದ್ದಾರೆ.
