ಕೇಂದ್ರ ಸರ್ಕಾರದಿಂದ ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್: ಔಷಧಿಗಳ ದರ ಭಾರೀ ಇಳಿಕೆ

Untitled Design 2026 11 09T130432.804

ಬೆಂಗಳೂರು: ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ  ಸಿಹಿಸುದ್ದಿ ಸಿಕ್ಕಿದೆ. ದುಬಾರಿ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚದಿಂದ ಕಂಗೆಟ್ಟಿದ್ದ ರೋಗಿಗಳಿಗೆ ಕೊಂಚ ನಿರಾಳತೆ ನೀಡುವ ಉದ್ದೇಶದಿಂದ ದೇಶಾದ್ಯಂತ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಹೊರಡಿಸಿರುವ ಆದೇಶದಂತೆ ಇಂದಿನಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ಈ ಆದೇಶದ ಪ್ರಕಾರ, 137 ಜೀವ ರಕ್ಷಕ ಕ್ಯಾನ್ಸರ್ ಔಷಧಿಗಳು ಸೇರಿದಂತೆ ಒಟ್ಟು 543 ಆಂಟಿ-ಕ್ಯಾನ್ಸರ್ ಔಷಧಿಗಳು ಮತ್ತು ಅವುಗಳ ವಿವಿಧ ಬ್ರ್ಯಾಂಡ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಕಡಿಮೆಯಾಗಲಿದೆ. ಕೆಲವು ಔಷಧಿಗಳ ಬೆಲೆಯಲ್ಲಿ ಶೇ.50ರಿಂದ ಗರಿಷ್ಠ ಶೇ.96.45ರಷ್ಟು ಇಳಿಕೆಯಾಗಿದೆ. ಇದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಪ್ರತೀ ತಿಂಗಳು ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿದ್ದ ರೋಗಿಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ದೊರೆಯುವ ನಿರೀಕ್ಷೆಯಿದೆ.

ಕೆಲವು ಔಷಧಿಗಳ ಬೆಲೆ ಶೇ.96.45ರಷ್ಟು ಇಳಿಕೆ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಹಲವು ಪ್ರಮುಖ ಔಷಧಿಗಳ ಬೆಲೆಗಳನ್ನು ಕಡಿತಗೊಳಿಸಲಾಗಿದೆ. ಇಮ್ಯುನೊಥೆರಪಿ ಔಷಧಿಗಳು, ಡೆನೋಸುಮ್ಯಾಬ್, ಪೆಗ್‌ಫಿಲ್‌ಗ್ರಾಸ್ಟಿಮ್ ಮತ್ತು ಬೆವಾಸಿಝುಮಾಬ್ ಸೇರಿದಂತೆ ವಿವಿಧ ಔಷಧಿಗಳ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೋಗಿಗಳಿಗೆ ದೀರ್ಘಕಾಲ ಔಷಧಿಗಳನ್ನು ಬಳಸುವ ಅಗತ್ಯವಿರುತ್ತದೆ. ಕೆಲವು ಔಷಧಿಗಳು ಅತ್ಯಂತ ದುಬಾರಿಯಾಗಿರುವುದರಿಂದ ಮಧ್ಯಮ ಮತ್ತು ಬಡ ಕುಟುಂಬಗಳು ಚಿಕಿತ್ಸೆಯ ವೆಚ್ಚ ಭರಿಸಲು ಸಾಲ ಮಾಡಬೇಕಾದ ಪರಿಸ್ಥಿತಿಯೂ ಎದುರಾಗುತ್ತದೆ. ಇದೀಗ ಬೆಲೆ ಇಳಿಕೆಯಿಂದ ಇಂತಹ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.

ವಾರ್ಷಿಕ ₹2,000 ಕೋಟಿಗೂ ಅಧಿಕ ಉಳಿತಾಯದ ನಿರೀಕ್ಷೆ

ಔಷಧಿಗಳ ಬೆಲೆ ಕಡಿತದಿಂದ ದೇಶದ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕವಾಗಿ ₹2,000 ಕೋಟಿಗೂ ಅಧಿಕ ಹಣ ಉಳಿತಾಯವಾಗುವ ನಿರೀಕ್ಷೆಯಿದೆ. ಔಷಧಿಗಳ ಬೆಲೆ ಕಡಿಮೆಯಾಗುವುದರಿಂದ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವ ಅಥವಾ ಆರ್ಥಿಕ ಸಂಕಷ್ಟದಿಂದ ಅಗತ್ಯ ಔಷಧಿಗಳನ್ನು ಖರೀದಿಸಲು ಸಾಧ್ಯವಾಗದ ರೋಗಿಗಳಿಗೆ ಅನುಕೂಲವಾಗಲಿದೆ.

ಕ್ಯಾನ್ಸರ್ ಔಷಧಿಗಳ ದುಬಾರಿ ಬೆಲೆ ಕುರಿತು ಈ ಹಿಂದೆ ಹಲವು ಬಾರಿ ಚರ್ಚೆಗಳು ನಡೆದಿದ್ದವು. ಕೆಲವು ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಹಿನ್ನೆಲೆ ಕರ್ನಾಟಕದ ಆರೋಗ್ಯ ಇಲಾಖೆಯೂ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಕ್ಯಾನ್ಸರ್ ಚಿಕಿತ್ಸೆಯ ವೆಚ್ಚದ ಕುರಿತು ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು.

ಈ ಎಲ್ಲ ಬೆಳವಣಿಗೆಗಳ ಬಳಿಕ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ವಿವಿಧ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಹೊಸ ದರಗಳು ದೇಶಾದ್ಯಂತ ಜಾರಿಗೆ ಬಂದಿರುವುದರಿಂದ ಔಷಧ ಮಾರಾಟಗಾರರು ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುವಂತಿಲ್ಲ.

ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದರೆ ಕ್ರಮ

ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಎನ್‌ಪಿಪಿಎ ನಿಗದಿಪಡಿಸಿರುವ ಪರಿಷ್ಕೃತ ದರದಲ್ಲೇ ಔಷಧಿಗಳನ್ನು ಮಾರಾಟ ಮಾಡಬೇಕು. ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಔಷಧಿಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಗ್ರಾಹಕರು ತಾವು ಖರೀದಿಸುವ ಔಷಧಿಗಳ ನೈಜ ಬೆಲೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 

Exit mobile version