ನವದೆಹಲಿ (ಜೂನ್ 23): ಕೇಂದ್ರ ಸಚಿವ ಸಂಪುಟದಲ್ಲಿ ಶೀಘ್ರವೇ ಮಹತ್ವದ ಪುನಾರಚನೆಯಾಗಲಿದೆ ಎಂಬ ವದಂತಿಗಳು ರಾಜಧಾನಿಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಇದಕ್ಕೆ ಮತ್ತೊಂದು ‘ಸಾಕ್ಷಿ’ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು (PM Modi) ಇಂದು (ಮಂಗಳವಾರ) ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಜಾರ್ಜ್ ಕುರಿಯನ್ ಅವರ ಅವಧಿ ಇತ್ತೀಚೆಗೆ ಮುಕ್ತಾಯಗೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ರಾಷ್ಟ್ರಪತಿಯನ್ನು ಭೇಟಿ ಮಾಡಿರುವುದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಖಾತೆಯ ರಾಜ್ಯ ಸಚಿವರಾಗಿದ್ದ ಜಾರ್ಜ್ ಕುರಿಯನ್ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡದಿದ್ದ ಹಿನ್ನೆಲೆ, ಖಾಲಿಯಾಗಿರುವ ಸ್ಥಾನಕ್ಕೆ ಹೊಸ ಮುಖವನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕೇವಲ ವದಂತಿಯಲ್ಲ, ಅದೊಂದು ಅನಿವಾರ್ಯತೆ ಎಂದು ಅಭಿಪ್ರಾಯಪಡಲಾಗುತ್ತಿದೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಮುಂಬರುವ ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ ಐದು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಸಮೀಪದಲ್ಲಿವೆ. ಈ ಚುನಾವಣೆಗಳ ದೃಷ್ಟಿಯಿಂದ, ಪಕ್ಷದ ಸಂಘಟನಾ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಹಿರಿಯ ಸಚಿವರನ್ನು ಕ್ಯಾಬಿನೆಟ್‌ನಿಂದ ಹೊರಗಿಟ್ಟು, ಅವರಿಗೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
Prime Minister Shri @narendramodi called on President Droupadi Murmu at Rashtrapati Bhavan. pic.twitter.com/shLEkfO3jw
— President of India (@rashtrapatibhvn) June 23, 2026
ಅಲ್ಲದೇ, ಹೊಸ ಮತ್ತು ಯುವ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಯೋಜನೆ ಸರ್ಕಾರದ್ದಾಗಿದೆ. ಈಗಾಗಲೇ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಕೆಲವು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಬದಲಾಯಿಸುವ ಅಥವಾ ಜವಾಬ್ದಾರಿ ಹೆಚ್ಚಿಸುವ ಆಲೋಚನೆಯೂ ಇದೆ.
ಆದರೆ, ಸಂಪುಟ ಪುನಾರಚನೆಯ ಹೊರತಾಗಿ, ಪ್ರಧಾನಿ ಮೋದಿ ಅವರು ರಾಷ್ಟ್ರಪತಿಯವರಿಗೆ ಮುಂಬರುವ ಸಂಸತ್ ಜಂಟಿ ಅಧಿವೇಶನ, ದೇಶದ ಆಂತರಿಕ ಭದ್ರತಾ ಪರಿಸ್ಥಿತಿ ಮತ್ತು ಸರ್ಕಾರದ ಮುಂದಿನ ಪ್ರಮುಖ ವಿಧೇಯಕಗಳ ಕುರಿತು ಅಪ್ಡೇಟ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಸಾಕ್ಷಿಯೆಂಬಂತೆ, ಜೂನ್ 24 ರಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟದ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಮತ್ತು ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
ಸಂಪುಟ ಪುನಾರಚನೆಯ ಮತ್ತೊಂದು ಪ್ರಮುಖ ಮತ್ತು ಜಟಿಲ ಅಂಶವೆಂದರೆ, ಇತರ ಪಕ್ಷಗಳಿಂದ ಬಂದು ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಹೊಸ ನಾಯಕರಿಗೆ ಸ್ಥಾನ ಕಲ್ಪಿಸುವುದು. ಕಳೆದ ತಿಂಗಳು ಆಮ್ ಆದ್ಮಿ ಪಕ್ಷದಿಂದ (AAP) ಬಿಜೆಪಿಗೆ ಬಂದ ರಾಘವ್ ಚಡ್ಡಾ ಸೇರಿದಂತೆ 7 ರಾಜ್ಯಸಭಾ ಸಂಸದರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. , ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಇತರೆ ಸಂಸದರು, ಹಾಗೂ ಉದ್ಧವ್ ಠಾಕ್ರೆ ಬಣದಿಂದ ಹೊರಬಂದು ಏಕನಾಥ್ ಶಿಂಧೆ ಶಿವಸೇನೆಗೆ ಸೇರಿದ ಸಂಸದರಿಗೂ ಮಂತ್ರಿ ಸ್ಥಾನ ನೀಡುವ ಒತ್ತಡವಿದೆ. ಈ ಎಲ್ಲಾ ‘ಹೊಸ ಸೇರ್ಪಡೆ’ಗಳನ್ನು ಸಮತೋಲನ ಮಾಡುವುದು ಮತ್ತು ಸಂಪುಟದಲ್ಲಿ ಅವರಿಗೆ ಸರಿಯಾದ ಸ್ಥಾನ ಕಲ್ಪಿಸುವುದು ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
