ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರಾಯ್ತಾ ಸೇವನೆ; 200ಕ್ಕೂ ಹೆಚ್ಚು ಮಂದಿಗೆ ರೇಬೀಸ್ ಲಸಿಕೆ

Untitled design 2025 12 29T182713.132

ಲಕ್ನೋ: ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಗ್ರಾಮಸ್ಥರಲ್ಲಿ ರೇಬೀಸ್ ಭೀತಿಯನ್ನುಂಟುಮಾಡಿದೆ. ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಲಾದ ‘ರಾಯ್ತಾ’ ಸೇವಿಸಿದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 200ಕ್ಕೂ ಹೆಚ್ಚು ಜನರಿಗೆ ರೇಬೀಸ್ ಲಸಿಕೆ ನೀಡಲಾಗಿದೆ.

ಡಿ.23ರಂದು ಪಿಪ್ರೌಲಿ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯೊಂದರಲ್ಲಿ ಗ್ರಾಮಸ್ಥರು ಊಟದಲ್ಲಿ ಭಾಗವಹಿಸಿದ್ದರು. ಆ ವೇಳೆ ರಾಯ್ತಾವನ್ನು ಸಹ ಊಟದೊಂದಿಗೆ ನೀಡಲಾಗಿತ್ತು. ಮೂರು ದಿನಗಳ ಬಳಿಕ ಡಿ.26ರಂದು ರಾಯ್ತಾ ತಯಾರಿಕೆಗೆ ಬಳಸಿದ್ದ ಎಮ್ಮೆ ರೇಬೀಸ್ ರೋಗದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗ್ರಾಮಸ್ಥರ ಮಾಹಿತಿಯಂತೆ, ಎಮ್ಮೆಗೆ ಕೆಲ ದಿನಗಳ ಹಿಂದೆ ನಾಯಿ ಕಚ್ಚಿದ್ದು, ಅದಾದ ನಂತರ ಎಮ್ಮೆಯಲ್ಲಿ ಅಸಹಜ ವರ್ತನೆ, ಅತಿಯಾದ ಕೋಪ, ಆಹಾರ ಸೇವನೆಗೆ ನಿರಾಕರಣೆ ಮೊದಲಾದ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಎಮ್ಮೆ ಮೃತಪಟ್ಟಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ರೇಬೀಸ್ ದೃಢಪಟ್ಟಿದೆ. ಆದರೆ, ಎಮ್ಮೆ ಸಾಯುವ ಮೊದಲು ಅದರ ಹಾಲನ್ನು ಸಂಗ್ರಹಿಸಿ, ಅದನ್ನೇ ಅಂತ್ಯಕ್ರಿಯೆಯ ಊಟಕ್ಕೆ ರಾಯ್ತಾ ತಯಾರಿಸಲು ಬಳಸಲಾಗಿತ್ತು ಎನ್ನಲಾಗಿದೆ.

ಈ ವಿಷಯ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ತಕ್ಷಣ ಗ್ರಾಮದ ಜನರು ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ 200ಕ್ಕೂ ಹೆಚ್ಚು ಜನರಿಗೆ ರೇಬೀಸ್ ಲಸಿಕೆ ನೀಡಿದೆ. ಲಸಿಕೆ ಪಡೆದವರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಸೇರಿದ್ದಾರೆ.

ಈ ಕುರಿತು ಮಾತನಾಡಿದ ಉಜಾನಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಮೇಶ್ವರ ಮಿಶ್ರಾ, “ಎಮ್ಮೆಗೆ ನಾಯಿ ಕಚ್ಚಿರುವುದು ಹಾಗೂ ಸಾಯುವ ಮೊದಲು ರೇಬೀಸ್ ಲಕ್ಷಣಗಳು ಕಂಡುಬಂದಿರುವುದು ದೃಢವಾಗಿದೆ. ಸಾಮಾನ್ಯವಾಗಿ ಹಾಲನ್ನು ಚೆನ್ನಾಗಿ ಕುದಿಸಿದ ನಂತರ ರೇಬೀಸ್ ಹರಡುವ ಸಾಧ್ಯತೆ ಬಹಳ ಕಡಿಮೆ. ಆದರೂ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹೀಗಾಗಿ ಯಾವುದೇ ಸಂಶಯವಿದ್ದ ಎಲ್ಲರಿಗೂ ಲಸಿಕೆ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ಬೊಗಳುತ್ತಾ ಕಚ್ಚಲು ಯತ್ನಿಸಿದ ವ್ಯಕ್ತಿ: ವಿಡಿಯೋ ವೈರಲ್‌

ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬೀದಿ ನಾಯಿ ಕಚ್ಚಿದ ಕೇವಲ ಕೆಲವೇ ಗಂಟೆಗಳಲ್ಲಿ 23 ವರ್ಷದ ಯುವಕನಲ್ಲಿ ರೇಬೀಸ್‌ನ ಭೀಕರ ಲಕ್ಷಣಗಳು ಕಾಣಿಸಿಕೊಂಡಿದ್ದು, ಆತ ನಾಯಿಯಂತೆ ವರ್ತಿಸಲು ಆರಂಭಿಸಿದ್ದಾನೆ. ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ಈ ಘಟನೆ ಅಲಿಗಢ ಜಿಲ್ಲೆಯ ಖೈರ್ ತಹಸಿಲ್ ವ್ಯಾಪ್ತಿಯ ಉತ್ಪಾರ್ ಗ್ರಾಮದಲ್ಲಿ ನಡೆದಿದೆ. ರಾಮ್‌ಕುಮಾರ್ ಅಲಿಯಾಸ್ ರಾಮು (23) ಎಂಬ ಯುವಕ ಡಿಸೆಂಬರ್ 20ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿ ನಾಯಿಯೊಂದು ಆತನ ಕಾಲಿಗೆ ಕಚ್ಚಿದೆ. ಗಾಯ ಹೆಚ್ಚು ಗಂಭೀರವಾಗಿಲ್ಲ ಎಂದು ಭಾವಿಸಿದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯದೆ ಮನೆಯಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಮರುಸಿನ ಆತನ ಸ್ಥಿತಿ ಹದಗೆಡಲು ಶುರುವಾಗಿದೆ.

ನಾಯಿ ಕಚ್ಚಿದ ಮರುದಿನದಿಂದಲೇ ರಾಮು ಆರೋಗ್ಯದಲ್ಲಿ ತೀವ್ರ ಬದಲಾವಣೆ ಕಾಣಿಸತೊಡಗಿದೆ. ಮೊದಲಿಗೆ ಜ್ವರ, ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಆತನ ವರ್ತನೆ ಸಂಪೂರ್ಣವಾಗಿ ಬದಲಾಯಿತು. ಏಕಾಏಕಿ ನಾಯಿಯಂತೆ ಶಬ್ದ ಮಾಡುವುದು, ಕೂಗುವುದು, ಎದುರಿಗೆ ಬಂದವರ ಮೇಲೆ ಎರಗಲು ಪ್ರಯತ್ನಿಸುವುದು, ಕಚ್ಚಲು ಯತ್ನಿಸುವಂತಹ ಭೀಕರ ಲಕ್ಷಣಗಳು ಕಾಣಿಸಿಕೊಂಡಿವೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ.

ರಾಮು ಸ್ಥಿತಿಯನ್ನು ಕಂಡ ಗ್ರಾಮಸ್ಥರು, ಕೊನೆಗೆ ಆತನನ್ನು ಮಂಚಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ಮನಕಲಕುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡಿದವರಲ್ಲಿ ಬೆಚ್ಚಿಬೀಳಿಸುವಂತಾಗಿದೆ.

ಆತನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರು ತಕ್ಷಣ ರಾಮುವನ್ನು ಖೈರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಯುವಕನ ಸ್ಥಿತಿಯನ್ನು ಪರಿಶೀಲಿಸಿ, ಇದು ರೇಬೀಸ್‌ನ ಲಕ್ಷಣಗಳು ಎಂದು ಶಂಕಿಸಿದ್ದಾರೆ. ತಕ್ಷಣ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಆತನನ್ನು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ರವಾನಿಸಲು ಸೂಚಿಸಿದ್ದಾರೆ.

ರಾಮು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ರೇಬೀಸ್ ಲಕ್ಷಣಗಳು ತೀವ್ರವಾಗಿರುವುದರಿಂದ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ. ರೇಬೀಸ್ ರೋಗವು ಒಮ್ಮೆ ತೀವ್ರ ಲಕ್ಷಣಗಳು ಕಾಣಿಸಿಕೊಂಡರೆ ಚಿಕಿತ್ಸೆ ಅತ್ಯಂತ ಕಷ್ಟಕರ ಎಂದು ವೈದ್ಯರು ತಿಳಿಸಿದ್ದಾರೆ.

Exit mobile version