ರಾಜ್ಯಪಾಲರ ಕಚೇರಿಗೆ ಬಾಂಬ್ ಬೆದರಿಕೆ..!

Untitled design 2026 01 23T121216.624

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯುನ್ನತ ಭದ್ರತಾ ವಲಯವಾದ ರಾಜಭವನಕ್ಕೆ (ರಾಜ್ಯಪಾಲರ ಕಚೇರಿ) ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಜಭವನಕ್ಕೆ ಬಂದ ಬೆದರಿಕೆ 

ಇದೇ ತಿಂಗಳ 14ರಂದು ರಾಜ್ಯಪಾಲರ ಕಚೇರಿಗೆ ಅನಾಮಧೇಯ ಇಮೇಲ್ ಒಂದು ಬಂದಿದ್ದು, ಅದರಲ್ಲಿ , ರಾಜಭವನದಲ್ಲಿ ಆರ್‌ಡಿಎಕ್ಸ್ (RDX) ಮತ್ತು ಐಇಡಿ (IED) ಬಾಂಬ್‌ಗಳನ್ನು ಇರಿಸಲಾಗಿದೆ. ಮಧ್ಯಾಹ್ನವೇ ಈ ಬಾಂಬ್‌ಗಳು ಸ್ಫೋಟಗೊಳ್ಳಲಿವೆ. ಇಬ್ಬರು ವ್ಯಕ್ತಿಗಳು ಸ್ಫೋಟಕದ ಟ್ರಿಗರ್ ಹಿಡಿದು ಸಿದ್ಧರಾಗಿದ್ದಾರೆ ಎಂದು ಇಮೇಲ್‌ನಲ್ಲಿ ಬರೆಯಲಾಗಿತ್ತು.

ಈ ಇಮೇಲ್ ಗಮನಿಸಿದ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ಪತ್ತೆ ದಳದ ಸಿಬ್ಬಂದಿಗಳು ಇಡೀ ರಾಜಭವನವನ್ನು ತಪಾಸಣೆ ನಡೆಸಿದರು. ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ಹುಸಿ ಬಾಂಬ್ ಬೆದರಿಕೆ (Hoax call) ಎಂದು ತಿಳಿದುಬಂದಿದೆ. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಚೇರಿಗೆ ಇಮೇಲ್ ಕಳುಹಿಸಿದ್ದವರ ಪತ್ತೆಗೆ ಸೈಬರ್ ಪೊಲೀಸರು ಬಲೆ ಬೀಸಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಬಾಂಬ್ ಬೆದರಿಕೆ ನಾಟಕ..

ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಪ್ರತೀಕ್ ಮಿಶ್ರಾ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪ್ರತೀಕ್ ಇತ್ತೀಚೆಗೆ ಯುವತಿಯೊಬ್ಬಳಿಗೆ ಪ್ರೇಮ ಪ್ರಸ್ತಾವನೆ ಹೇಳಿದ್ದನು ಆದರೆ ಆಕೆ ಇವನ ಪ್ರೀತಿ ನಿರಾಕರಿಸಿದ್ದಳು.

ಇದರಿಂದ ಕೋಪಗೊಡ ಪ್ರತೀಕ್, ಆ ಯುವತಿಯನ್ನು ಪೊಲೀಸರು ಬಂಧಿಸುವಂತೆ ಮಾಡಲು ಸಂಚು ರೂಪಿಸಿದ್ದನು. ಜನೆವರಿ 11ರಂದು ಆ ಯುವತಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಪುರಿ ದೇವಾಲಯ ಮತ್ತು ಶಾಪಿಂಗ್ ಮಾಲ್‌ಗಳನ್ನು ಸ್ಫೋಟಿಸುತ್ತೇನೆ ಎಲ್ಲ ಕಡೆ ಬಾಂಬ್‌ಗಲನ್ನ ಇರಿಸಿದ್ದೇವೆ. ಇದರ ಜೊತೆಗೆ ಸಂಸದ ಸುಭಾಶಿಷ್ ಖುಂಟಿಯಾ ಅವರ ಮೇಲೆ ಗುಂಡಿನ ದಾಳಿ ನಡೆಸುತ್ತೇನೆ ಎಂದು ಪೋಸ್ಟ್ ಮಾಡಿದ್ದನು. ಡಿಜಿಟಲ್ ಫೋರೆನ್ಸಿಕ್ ತನಿಖೆ ನಡೆಸಿದ ಪುರಿ ಪೊಲೀಸರಿಗೆ ಅಚ್ಚರಿಯಾಗಿದೆ. ಈ ಕೃತ್ಯ ಎಸಗಿದ್ದು ಯುವತಿ ಅಲ್ಲ ಬದಲಿಗೆ ಯುವಕ ಹಾಗೂ ಯುವತಿ ಮೇಲಿದ್ದ ದ್ವೇಷಕ್ಕಾಗಿ ಪ್ರತೀಕ್‌ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ನಂತರ ಪ್ರತೀಕ್‌ನನ್ನು ಪೊಲೀಸರು ಬಂದಿಸಿದ್ದಾರೆ.

Exit mobile version