ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಸುಮಾರು 30 ವರ್ಷಗಳ ಬಳಿಕ ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬಿಎಂಸಿ (BMC) ಮೇಲೆ ಬಿಜೆಪಿ ವಿಜಯಪತಾಕೆ ಹಾರಿಸಿದೆ.ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಠಾಕ್ರೆ ಕುಟುಂಬದ ಭದ್ರಕೋಟೆ ಮುಂಬೈ, ಈಗ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಮೈತ್ರಿಕೂಟದ ಪಾಲಾಗಿದೆ.
ಹಿಂದುತ್ವದ ಅಪ್ರತಿಮ ನಾಯಕ ಬಾಳಾ ಸಾಹೇಬ್ ಠಾಕ್ರೆ ಕಟ್ಟಿದ್ದ ಶಿವಸೇನೆ ಪಕ್ಷವನ್ನ, ಅವರ ಪುತ್ರ ಉದ್ಧವ್ ಠಾಕ್ರೆ ರಾಜಕೀಯ ತಂತ್ರಗಾರಿಕೆಯ ವೈಫಲ್ಯದಿಂದಾಗಿ ಕಳೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಜೊತೆ ಎಂದೂ ಕೈಕುಲುಕುವುದಿಲ್ಲ ಎಂದು ಗುಡುಗಿದ್ದ ಬಾಳಾ ಠಾಕ್ರೆಯವರ ಆಶಯಕ್ಕೆ ವಿರುದ್ಧವಾಗಿ, ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆ ಅತ್ಯಂತ ವ್ಯವಸ್ಥಿತವಾಗಿ ಹೋರಾಡಿ ಠಾಕ್ರೆ ಬಣವನ್ನು ಸೋಲಿಸಿದೆ.
ಚುನಾವಣಾ ಫಲಿತಾಂಶದ ಅಂಕಿ-ಅಂಶಗಳು
ಒಟ್ಟು 227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು ಬೇಕಿದ್ದ ಮ್ಯಾಜಿಕ್ ನಂಬರ್ ಅನ್ನು ಬಿಜೆಪಿ-ಶಿವಸೇನೆ (ಶಿಂಧೆ) ಮೈತ್ರಿಕೂಟ ಸುಲಭವಾಗಿ ತಲುಪಿದೆ.
-
ಮಹಾಯುತಿ (ಬಿಜೆಪಿ + ಶಿಂಧೆ ಶಿವಸೇನೆ): 129 ಸ್ಥಾನಗಳು
-
ಮಹಾವಿಕಾಸ್ ಅಘಾಡಿ (ಉದ್ಧವ್ ಶಿವಸೇನೆ + ಎಂಎನ್‌ಎಸ್): 72 ಸ್ಥಾನಗಳು
-
ಕಾಂಗ್ರೆಸ್ ಮೈತ್ರಿಕೂಟ: 15 ಸ್ಥಾನಗಳು
-
ಇತರರು: 11 ಸ್ಥಾನಗಳು
ಬಿಜೆಪಿಯ ಭರ್ಜರಿ ಜಯಕ್ಕೆ ಕಾರಣಗಳೇನು ?
ಶಿವಸೇನೆಯ ಸಾಂಪ್ರದಾಯಿಕ ಮತಗಳು ಈ ಬಾರಿ ಶಿಂಧೆ ಮತ್ತು ಉದ್ಧವ್ ಬಣದ ನಡುವೆ ವಿಭಜನೆಯಾಗಿವೆ. ಇದರ ನೇರ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ. ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್‌ಎಸ್ ಜೊತೆಗಿನ ಮೈತ್ರಿಯೂ ಉದ್ಧವ್ ಕೈಹಿಡಿಯಲಿಲ್ಲ.
ಕೇವಲ ಮುಂಬೈ ಮಾತ್ರವಲ್ಲದೆ, ಪಶ್ಚಿಮ ಮಹಾರಾಷ್ಟ್ರದ ಪ್ರಬಲ ಕೇಂದ್ರವಾದ ಪುಣೆಯಲ್ಲೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಬಿಜೆಪಿ ಶಾಕ್ ನೀಡಿದೆ. ಪುಣೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 90 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕಪಕ್ಷೀಯ ಸಾಧನೆ ಮಾಡಿದೆ. ಅಜಿತ್ ಪವಾರ್ ಪಡೆ ಕೇವಲ 20 ಸ್ಥಾನಗಳಿಸಿದ್ದಾರೆ. ಇದು ದೇವೇಂದ್ರ ಫಡ್ನವೀಸ್ ಅವರ ಕಾರ್ಯತಂತ್ರಕ್ಕೆ ಸಿಕ್ಕ ದೊಡ್ಡ ಜಯವಾಗಿದೆ.
ಈ ಚುನಾವಣೆಯಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದಾನೆ. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
