ಮಹಾರಾಷ್ಟ್ರದ ನಗರ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ರಾಜ್ಯದ ಹಲವಾರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಮುಂಬೈ, ನವಿ ಮುಂಬೈ, ಥಾಣೆ, ಪುಣೆ, ನಾಸಿಕ್, ಪಿಂಪ್ರಿ-ಚಿಂಚ್ವಾಡ್, ಪನ್ವೇಲ್, ಕಲ್ಯಾಣ್ ಹಾಗೂ ಮೀರಾ-ಭಾಯಂದರ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಪ್ರಭಾವ ಸ್ಪಷ್ಟವಾಗಿ ಗೋಚರಿಸಿದೆ.
ಬಿಎಂಸಿ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗಿನಿಂದ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳಲ್ಲೇ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುನ್ನಡೆಯಲ್ಲಿದೆ. 227 ವಾರ್ಡ್‌ಗಳಲ್ಲಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಶಿವಸೇನೆ (ಶಿಂಧೆ ಬಣ) 9 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 12 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೂ, ನಿರೀಕ್ಷಿತ ಸಾಧನೆ ಮಾಡಲು ವಿಫಲವಾಗಿದೆ.
ಮಹಾರಾಷ್ಟ್ರದ ಒಟ್ಟು 2869 ವಾರ್ಡ್‌ಗಳ ಪೈಕಿ ಸದ್ಯಕ್ಕೆ 1696 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಬಿಜೆಪಿ 866 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಮೇಲುಗೈ ತೋರಿಸಿದೆ. ಶಿವಸೇನೆ (ಶಿಂಧೆ) 113, ಶಿವಸೇನೆ (ಉದ್ಧವ್ ಠಾಕ್ರೆ) 54, ಎನ್‌ಸಿಪಿ 55, ಶರದ್ ಪವಾರ್ ನೇತೃತ್ವದ ಎಸ್‌ಸಿಪಿ 30, ಕಾಂಗ್ರೆಸ್ 108 ಸ್ಥಾನಗಳಲ್ಲಿ ಮುನ್ನಡೆ ಪಡೆದಿವೆ.
ನಗರವಾರು ಫಲಿತಾಂಶಗಳನ್ನು ಗಮನಿಸಿದರೆ, ಮುಂಬೈ ಮತ್ತು ನವಿ ಮುಂಬೈನಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿದಿದೆ. ಥಾಣೆಯಲ್ಲಿ ಶಿವಸೇನೆ (ಶಿಂಧೆ ಬಣ) ಮೇಲುಗೈ ಸಾಧಿಸಿದೆ. ನಾಸಿಕ್, ಪುಣೆ ಹಾಗೂ ಪಿಂಪ್ರಿ-ಚಿಂಚ್ವಾಡ್ ಮುನ್ಸಿಪಲ್ ಕಾರ್ಪೋರೇಶನ್‌ಗಳಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಪನ್ವೇಲ್, ಕಲ್ಯಾಣ್ ಮತ್ತು ಮೀರಾ-ಭಾಯಂದರ್ ಪ್ರದೇಶಗಳಲ್ಲಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ.
ಈ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಮತದಾರರು ನಿರೀಕ್ಷಿತ ಬೆಂಬಲ ನೀಡದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅದೇ ರೀತಿ, ಅಜಿತ್ ಪವಾರ್ ಮತ್ತು ಶರದ್ ಪವಾರ್ ಬಣಗಳು ಒಂದಾದರೂ ಮತದಾರರ ಸ್ಪಷ್ಟ ಒಲವು ಪಡೆಯಲು ವಿಫಲವಾದಂತಾಗಿದೆ. ಇದರಿಂದಾಗಿ ಮಹಾಯುತಿ ಮೈತ್ರಿಕೂಟಕ್ಕೆ ಲಾಭವಾಗಿದ್ದು, ಆಡಳಿತಾರೂಢ ಮೈತ್ರಿಯ ಮೇಲಿನ ಜನರ ವಿಶ್ವಾಸ ಇನ್ನಷ್ಟು ದೃಢವಾಗಿದೆ.
