ರಾಜ್ಯಸಭೆ ಚುನಾವಣೆ: ಬಿಜೆಪಿಯ 11 ಅಭ್ಯರ್ಥಿಗಳ ಪಟ್ಟಿ ಪ್ರಕಟ, ಪ್ರಮುಖ ನಾಯಕರಿಗೆ ಟಿಕೆಟ್

Untitled design 2026 06 04T225506.873

ನವದೆಹಲಿ, ಜೂನ್ 4: ಮುಂಬರುವ ರಾಜ್ಯಸಭೆ ಚುನಾವಣೆ ಹಾಗೂ ಖಾಲಿ ಇರುವ ಕೆಲವು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 11 ನಾಯಕರಿಗೆ ಪಕ್ಷವು ರಾಜ್ಯಸಭೆ ಟಿಕೆಟ್ ಘೋಷಿಸಿದ್ದು, ವಿವಿಧ ರಾಜ್ಯಗಳ ಪ್ರಭಾವಿ ಮುಖಂಡರಿಗೆ ಅವಕಾಶ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಮಹತ್ವದ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ. ರಾಜ್ಯವಾರು ರಾಜಕೀಯ ಸಮೀಕರಣ, ಪಕ್ಷದ ಸಂಘಟನಾ ಬಲ ಹಾಗೂ ಭವಿಷ್ಯದ ಚುನಾವಣಾ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜಸ್ಥಾನದಿಂದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ. ಸದ್ಯ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೂನಿಯಾ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮತ್ತಷ್ಟು ದೊಡ್ಡ ಜವಾಬ್ದಾರಿ ನೀಡುವ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

ಮಧ್ಯಪ್ರದೇಶದಿಂದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಹಾಗೂ ರಜನೀಶ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ತರುಣ್ ಚುಗ್ ಅವರಿಗೆ ರಾಜ್ಯಸಭೆ ಪ್ರವೇಶದ ಮೂಲಕ ಮತ್ತಷ್ಟು ಹೊಣೆಗಾರಿಕೆ ನೀಡಲು ಬಿಜೆಪಿ ನಿರ್ಧರಿಸಿದೆ.

ಗುಜರಾತ್‌ನಿಂದ ರಾಜುಭಾಯ್ ಶುಕ್ಲಾ, ಮುಖೇಶ್‌ಭಾಯ್ ರಾಥ್ವಾ, ಮಾನಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘ್ ಜಿಭಾಯ್ ಕಂಜಾರಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಅರುಣಾಚಲ ಪ್ರದೇಶದಿಂದ ತಾಯಿ ತಾಗಕ್ ಅಭ್ಯರ್ಥಿಯಾಗಿದ್ದರೆ, ಮಣಿಪುರದಿಂದ ಎ. ಶಾರದಾ ದೇವಿ ಅವರನ್ನು ಪಕ್ಷ ಆಯ್ಕೆ ಮಾಡಿದೆ.

ವಿವಿಧ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ಶಾಸಕರ ಸಂಖ್ಯಾಬಲವನ್ನು ಗಮನಿಸಿದರೆ, ಘೋಷಿಸಲಾದ ಅಭ್ಯರ್ಥಿಗಳ ಬಹುತೇಕ ಗೆಲುವು ಖಚಿತ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇದೇ ಕಾರಣಕ್ಕೆ ಅನುಭವಿಗಳು ಹಾಗೂ ಸಂಘಟನಾ ನಾಯಕರಿಗೆ ಆದ್ಯತೆ ನೀಡಲಾಗಿದೆ.

ಇದಕ್ಕೂ ಮೊದಲು ಚುನಾವಣಾ ಆಯೋಗವು ರಾಜ್ಯಸಭೆಯ ಖಾಲಿ ಇರುವ 24 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯುವುದಾಗಿ ಘೋಷಿಸಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಹಾಲಿ ಸದಸ್ಯರ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಈ ಚುನಾವಣೆ ನಡೆಯುತ್ತಿದೆ.

ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ ಆಂಧ್ರಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ನಾಲ್ಕು ಸ್ಥಾನಗಳಿಗೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಲಾ ಮೂರು ಸ್ಥಾನಗಳಿಗೆ, ಜಾರ್ಖಂಡ್‌ನಲ್ಲಿ ಎರಡು ಸ್ಥಾನಗಳಿಗೆ ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲಿ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಜೂನ್ 8 ಆಗಿದ್ದು, ನಂತರ ಪರಿಶೀಲನೆ ಹಾಗೂ ಹಿಂಪಡೆಯುವ ಪ್ರಕ್ರಿಯೆ ನಡೆಯಲಿದೆ. ಜೂನ್ 18ರಂದು ಮತದಾನ ಹಾಗೂ ಮತ ಎಣಿಕೆ ನಡೆಯಲಿದ್ದು, ಫಲಿತಾಂಶಗಳು ಅದೇ ದಿನ ಪ್ರಕಟವಾಗುವ ಸಾಧ್ಯತೆ ಇದೆ.

 

Exit mobile version