ಶಾಸಕನಿಗೆ ಸೀಟು ಬಿಟ್ಟುಕೊಡದ ಪ್ರಯಾಣಿಕನಿಗೆ ಥಳಿತ: ವಿಡಿಯೋ ವೈರಲ್

4112 (8)

ಲಖನೌ: ರಾಜಕಾರಣಿಗಳಿಗೆ ಕುರ್ಚಿಯ ಮಹತ್ವ ಎಷ್ಟಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕುರ್ಚಿಗಾಗಿ ಸರ್ಕಾರಗಳೇ ಬಿದ್ದಿರುವ ಉದಾಹರಣೆಗಳಿವೆ. ಆದರೆ ಇಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜೀವ್ ಸಿಂಗ್ ತಾನು ವಂದೇ ಭಾರತ್ ರೈಲಿನಲ್ಲಿದ್ದೇನೆ ಎಂಬುದನ್ನೇ ಮರೆತು, ಸೀಟು ಬಿಟ್ಟುಕೊಡದ ಕಾರಣಕ್ಕೆ ಒಬ್ಬ ಪ್ರಯಾಣಿಕನ ಮೇಲೆ ತನ್ನ ಬೆಂಬಲಿಗರಿಂದ ದಾಳಿ ಮಾಡಿಸಿದ ಘಟನೆ ನಡೆದಿದೆ. ಈ ಘಟನೆ ದೆಹಲಿ-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ನಡೆದಿದ್ದು, ಶಾಸಕನ ವರ್ತನೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಸೀಟು ಬುಕ್ ಮಾಡಿದ ಪ್ರಯಾಣಿಕನಿಗೆ ಥಳಿತ

ಝಾನ್ಸಿ ಕ್ಷೇತ್ರದ ಶಾಸಕ ರಾಜೀವ್ ಸಿಂಗ್ ತಮ್ಮ ಕುಟುಂಬದೊಂದಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಶಾಸಕನ ಸೀಟು ಕೆಲವು ಸಾಲುಗಳ ಹಿಂದಿರುವುದರಿಂದ, ಆತನ ಪತ್ನಿ ಮತ್ತು ಮಕ್ಕಳ ಸೀಟು ಮುಂಭಾಗದಲ್ಲಿತ್ತು. ಈ ಸೀಟುಗಳ ಪಕ್ಕದಲ್ಲಿ ಮತ್ತೊಬ್ಬ ಪ್ರಯಾಣಿಕ ತಾನು ಬುಕ್ ಮಾಡಿದ ಸೀಟಿನಲ್ಲಿ ಕುಳಿತಿದ್ದನು. ರಾಜೀವ್ ಸಿಂಗ್ ಮತ್ತು ಕುಟುಂಬಸ್ಥರು ರೈಲು ಹತ್ತಿದ ನಂತರ, ಶಾಸಕನ ಕುಟುಂಬದ ಸೀಟಿನ ಜೊತೆಗಿನ ಸೀಟನ್ನು ಬಿಟ್ಟುಕೊಡುವಂತೆ ಪ್ರಯಾಣಿಕನಿಗೆ ಗದರಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಮನವಿ ಮಾಡಿಕೊಂಡು ಸೀಟು ಬದಲಾಯಿಸುತ್ತಾರೆ. ಆದರೆ, ಶಾಸಕ ರಾಜೀವ್ ಸಿಂಗ್ ತನ್ನ ಅಧಿಕಾರದ ದರ್ಪ ತೋರಿಸಿ, ಪ್ರಯಾಣಿಕನಿಗೆ ಸೀಟು ಬಿಟ್ಟುಕೊಡುವಂತೆ ಒತ್ತಾಯಿಸಿದ್ದಾರೆ. ಪ್ರಯಾಣಿಕ, ತಾನು ಸರಿಯಾಗಿ ಬುಕ್ ಮಾಡಿದ ಸೀಟಿನಲ್ಲಿ ಕುಳಿತಿದ್ದೇನೆ ಎಂದು ಶಾಸಕನ ಗದರಿಕೆಗೆ ಒಪ್ಪದೆ, ಸೀಟು ಬಿಟ್ಟುಕೊಡಲು ನಿರಾಕರಿಸಿದ್ದಾನೆ.

ಬೆಂಬಲಿಗರಿಂದ ದಾಳಿ

ಪ್ರಯಾಣಿಕನ ನಿರಾಕರಣೆಯಿಂದ ಕೆರಳಿದ ಶಾಸಕ ರಾಜೀವ್ ಸಿಂಗ್, ತನ್ನ ಬೆಂಬಲಿಗರಿಗೆ ಕರೆ ಮಾಡಿ, ಝಾನ್ಸಿ ರೈಲು ನಿಲ್ದಾಣಕ್ಕೆ ಬರಲು ಸೂಚಿಸಿದ್ದಾರೆ. ರೈಲು ಝಾನ್ಸಿಯಲ್ಲಿ ನಿಲುಗಡೆಯಾಗುತ್ತಿದ್ದಂತೆ, ಶಾಸಕನ ಬೆಂಬಲಿಗರು ಮತ್ತು ಕೆಲವು ಗೂಂಡಾಗಳು ರೈಲಿನ ಬೋಗಿಗೆ ಹತ್ತಿ, ಪ್ರಯಾಣಿಕನ ಮೇಲೆ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದಾರೆ. ಸಿಕ್ಕ ವಸ್ತುಗಳಿಂದ ಥಳಿಸಿ, ಮುಖಕ್ಕೆ ಹೊಡೆದು, ಕೊನೆಗೆ ಆತನನ್ನು ರೈಲಿನಿಂದ ಹೊರಗೆ ಎಳೆದು ಹಾಕಿದ್ದಾರೆ. ಈ ಗೂಂಡಾಗಿರಿಯ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಸಕನಿಂದ ದೂರು

ಶಾಸಕ ರಾಜೀವ್ ಸಿಂಗ್ ಈ ಘಟನೆಯ ಕುರಿತು ದೂರು ದಾಖಲಿಸಿದ್ದಾರೆ. ಆದರೆ, ತಮ್ಮ ದೂರಿನಲ್ಲಿ, ಪ್ರಯಾಣಿಕ ತಮ್ಮ ಕುಟುಂಬಸ್ಥರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಕೆಲವರು ಆತನ ಮೇಲೆ ದಾಳಿ ಮಾಡಿದ್ದಾರೆ ಎಂದು ತಿರುವು ನೀಡಿದ್ದಾರೆ. ಆದರೆ, ರೈಲಿನ ಇತರ ಪ್ರಯಾಣಿಕರು ಈ ಘಟನೆ ಸೀಟಿನ ವಿವಾದದಿಂದ ಆರಂಭವಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕ ರಾಜೀವ್ ಸಿಂಗ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

Exit mobile version