AI ಶೃಂಗಸಭೆ: ಸಮೀಟ್‌ನಿಂದ ಬಿಲ್ ಗೇಟ್ಸ್ ಹಿಂದೆ ಸರಿದಿದ್ದೇಕೆ ?

Untitled design 2026 02 19T102802.821

ನವದೆಹಲಿ: ರಾಜಧಾನಿಯ ಭಾರತ್ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ (India AI Impact Summit) ವಿಶ್ವದ ಗಮನ ಸೆಳೆದಿದೆ. ಆದರೆ, ತಂತ್ರಜ್ಞಾನ ಲೋಕದ ದಿಗ್ಗಜ ಬಿಲ್ ಗೇಟ್ಸ್ ಈ ಸಮಾವೇಶದಲ್ಲಿ ಇಂದು ಮಾಡಬೇಕಿದ್ದ ನಿಗದಿತ ಭಾಷಣವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ. ಇದು ಶೃಂಗಸಭೆಯಲ್ಲಿ ಭಾಗವಹಿಸಿದ ನಾಯಕರು ಮತ್ತು ಉದ್ಯಮಿಗಳಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಗೊಂದಲಮಯ ಬೆಳವಣಿಗೆಗಳು

ಫೆಬ್ರವರಿ 16 ರಂದು ಆರಂಭವಾದ ಈ ಶೃಂಗಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಲ್ ಗೇಟ್ಸ್ ಅವರ ಹೆಸರನ್ನು ‘ಪ್ರಮುಖ ಭಾಷಣಕಾರರು’ ಎಂದು ನಮೂದಿಸಲಾಗಿತ್ತು. ಇಂದು (ಫೆಬ್ರವರಿ 19) ಬೆಳಿಗ್ಗೆ 11.50 ಕ್ಕೆ ಅವರು 12 ನಿಮಿಷಗಳ ಕಾಲ ಭಾಷಣ ಮಾಡಬೇಕಿತ್ತು. ಆದರೆ, ಬುಧವಾರ ಇದ್ದಕ್ಕಿದ್ದಂತೆ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇಂದು ಗೇಟ್ಸ್ ಫೌಂಡೇಶನ್ ಇದನ್ನು ಅಧಿಕೃತವಾಗಿ ದೃಢಪಡಿಸಿದ್ದು, ಬಿಲ್ ಗೇಟ್ಸ್ ಅವರ ಬದಲಿಗೆ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತ ಕಚೇರಿಯ ಅಧ್ಯಕ್ಷ ಅಂಕುರ್ ವೋರಾ ಅವರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದೆ.

ವಿವಾದದ ಹಿನ್ನೆಲೆ ಏನು?

ಬಿಲ್ ಗೇಟ್ಸ್ ಅವರ ಈ ನಿರ್ಧಾರದ ಹಿಂದೆ ಅಮೆರಿಕದ ಕುಖ್ಯಾತ ಅಪರಾಧಿ ಜೆಫ್ರಿ ಎಪ್ಸ್ಟೀನ್ (Jeffrey Epstein) ಪ್ರಕರಣದ ವಿವಾದಾತ್ಮಕ ದಾಖಲೆಳಿರಬಹುದು ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಎಪ್ಸ್ಟೀನ್ ಫೈಲ್ಸ್‌ಗಳಲ್ಲಿ ಬಿಲ್ ಗೇಟ್ಸ್ ಅವರ ಹೆಸರು ಪ್ರಸ್ತಾಪವಾಗಿದ್ದು, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಂತ್ರಸ್ತರ ಪರವಾಗಿ ನಿಲ್ಲುವುದು ಸರ್ಕಾರದ ಆದ್ಯತೆಯಾಗಿದ್ದು, ಈ ವಿವಾದದ ಹಿನ್ನೆಲೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಮರುಪರಿಶೀಲಿಸಲಾಗಿದೆ ಎಂದು ಕೆಲವು ಸರ್ಕಾರಿ ಮೂಲಗಳು ತಿಳಿಸಿವೆ. ಆದಾಗ್ಯೂ, ಗೇಟ್ಸ್ ಅವರ ವಕ್ತಾರರು ಈ ಆರೋಪಗಳನ್ನು ಸಂಪೂರ್ಣ ಅಸಂಬದ್ಧ ಎಂದು ಈ ಹಿಂದೆಯೇ ತಳ್ಳಿಹಾಕಿದ್ದಾರೆ.

ಶೃಂಗಸಭೆಯ ಇತರ ಹೈಲೈಟ್ಸ್

ಸಭೆಯಲ್ಲಿ ಬಿಲ್ ಗೇಟ್ಸ್ ಇಲ್ಲದಿದ್ದರೂ, ಶೃಂಗಸಭೆಯು ಜಾಗತಿಕ ಗಣ್ಯರಿಂದ ಕಳೆಗಟ್ಟಿದೆ.

ಬಿಲ್ ಗೇಟ್ಸ್ ಅವರ ಭಾಷಣ ರದ್ದಾಗಿರುವುದು ಶೃಂಗಸಭೆಯ ಮೇಲೆ ಸ್ವಲ್ಪ ಮಟ್ಟದ ಪ್ರಭಾವ ಬೀರಿದ್ದರೂ, ಭಾರತದ ಎಐ ಮಹತ್ವಾಕಾಂಕ್ಷೆಯ ಪಯಣಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಗೇಟ್ಸ್ ಫೌಂಡೇಶನ್ ಭಾರತದ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳ ಬಗ್ಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

Exit mobile version