ಪಾಟ್ನಾ: ಬಿಹಾರ ರಾಜಕೀಯದಲ್ಲಿ ದಶಕಗಳ ಕಾಲ ಕುಟುಂಬ ರಾಜಕಾರಣದಿಂದ ದೂರವಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕುಟುಂಬ, ಈಗ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಇಂದು (ಮಾರ್ಚ್ 8) ಜನತಾದಳ (ಯುನೈಟೆಡ್) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ದೀರ್ಘಕಾಲದಿಂದ ಸಾರ್ವಜನಿಕ ಜೀವನ ಮತ್ತು ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ 50 ವರ್ಷದ ನಿಶಾಂತ್ ಕುಮಾರ್, ಪಾಟ್ನಾದ ಜೆಡಿಯು ಪ್ರಧಾನ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಪಡೆದರು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಝಾ ಅವರು ನಿಶಾಂತ್ ಅವರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಲಾಲನ್ ಸಿಂಗ್, ಬಿಹಾರ ಉಪಮುಖ್ಯಮಂತ್ರಿ ವಿಜಯ್ ಚೌಧರಿ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದಲ್ಲಿ ತಂದೆ ನಿತೀಶ್ ಕುಮಾರ್ ಹಾಜರಿರಲಿಲ್ಲ.
ನಿಶಾಂತ್ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಇದು ಜೆಡಿಯು ಪಕ್ಷದಲ್ಲಿ ಯುವ ನಾಯಕತ್ವದ ಸಂಚಲನಕ್ಕೆ ಕಾರಣವಾಗಿದೆ.
ಮುಂದಿನ ಉಪಮುಖ್ಯಮಂತ್ರಿ ನಿಶಾಂತ್ ಕುಮಾರ್ ?
ನಿಶಾಂತ್ ಅವರ ಈ ದಿಢೀರ್ ರಾಜಕೀಯ ಪ್ರವೇಶ ಬಿಹಾರದ ಮುಂದಿನ ಆಡಳಿತಾತ್ಮಕ ಬದಲಾವಣೆಯ ದಿಕ್ಸೂಚಿ ಎನ್ನಲಾಗುತ್ತಿದೆ. ನಿತೀಶ್ ಕುಮಾರ್ ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವುದು, ಅವರು ಕೇಂದ್ರ ರಾಜಕಾರಣಕ್ಕೆ ತೆರಳಿ ರಾಜ್ಯದ ಜವಾಬ್ದಾರಿಯನ್ನು ಮಗನಿಗೆ ಹಸ್ತಾಂತರಿಸಲಿದ್ದಾರೆ ಎಂಬ ವದಂತಿಗಳಿಗೆ ಪುಷ್ಟಿ ನೀಡಿದೆ.
ಜೆಡಿಯು ಹಿರಿಯ ನಾಯಕ ಮತ್ತು 10 ಬಾರಿ ಶಾಸಕರಾಗಿರುವ ಹರಿ ನಾರಾಯಣ್ ಸಿಂಗ್ ಅವರ ಹೇಳಿಕೆ ಈ ಚರ್ಚೆಯನ್ನು ಮತ್ತಷ್ಟು ಕಾವೇರಿಸಿದೆ. ನಿನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ, ನಿಶಾಂತ್ ಕುಮಾರ್ ಅವರನ್ನು ಬಿಹಾರದ ಮುಂದಿನ ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಕ್ಷದ ಎಲ್ಲಾ ಶಾಸಕರು ಮತ್ತು ಸಂಸದರು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ನಿಶಾಂತ್ ಕುಮಾರ್ ಅವರ ಪ್ರವೇಶದೊಂದಿಗೆ ಜೆಡಿಯು ಈಗ ‘ಯುವ-ಚಾಲಿತ’ ಕಾರ್ಯಸೂಚಿಯ ಮೇಲೆ ಗಮನ ಹರಿಸಲು ಮುಂದಾಗಿದೆ. ಬಿಹಾರದಲ್ಲಿ ತೇಜಸ್ವಿ ಯಾದವ್ ಅವರಂತಹ ಯುವ ನಾಯಕರ ಅಬ್ಬರಕ್ಕೆ ಸರಿಸಾಟಿಯಾಗಿ ನಿಶಾಂತ್ ಅವರನ್ನು ಕಣಕ್ಕಿಳಿಸುವುದು ನಿತೀಶ್ ಕುಮಾರ್ ಅವರ ತಂತ್ರಗಾರಿಕೆ ಎನ್ನಲಾಗಿದೆ. ಇಂಜಿನಿಯರಿಂಗ್ ಪದವೀಧರರಾಗಿರುವ ನಿಶಾಂತ್, ಸೌಮ್ಯ ಸ್ವಭಾವದ ವ್ಯಕ್ತಿತ್ವಕ್ಕೆ ಹೆಸರಾದವರು. ತಂದೆಯಂತೆಯೇ ಸ್ವಚ್ಛ ಹಸ್ತದ ರಾಜಕಾರಣವನ್ನು ಅವರು ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಾರೆಯಾಗಿ, ಬಿಹಾರದ ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿದ್ದು, ನಿಶಾಂತ್ ಕುಮಾರ್ ಅವರ ಸೇರ್ಪಡೆಯು ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ.
