ಬಾಂಗ್ಲಾದೇಶದಲ್ಲಿ ಹಿಂದೂ ನಾಯಕನ ಬರ್ಬರ ಹ*ತ್ಯೆ: ಭಾರತ ತೀವ್ರ ಆಕ್ರೋಶ

Untitled design 2025 04 20t082109.559

ಢಾಕಾ/ದೆಹಲಿ (ಏ.20): ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದೌರ್ಜನ್ಯ ಮುಂದುವರೆದಿದೆ. ದಿನಜಾಪುರದಲ್ಲಿ ಪ್ರಭಾವಿ ಹಿಂದೂ ನಾಯಕ ಭಾವೇಶ್‌ ಚಂದ್ರ ರಾಯ್‌ (58) ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಾಂಗ್ಲಾ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪ ಹೊರಡಿಸಿದೆ.

ಭಾವೇಶ್‌ ಚಂದ್ರ ರಾಯ್‌ ಬಾಂಗ್ಲಾದ ಪೂಜಾ ಉದ್ಯಾಪನ್ ಪರಿಷತ್‌ನ ಬಿರಾಲ್‌ ವಿಭಾಗದ ಉಪಾಧ್ಯಕ್ಷರಾಗಿದ್ದು, ಹಿಂದೂ ಸಮುದಾಯದ ಹಕ್ಕುಗಳಿಗಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದವರು. ಗುರುವಾರ ಸಂಜೆ, ನಾಲ್ವರು ಅಪರಿಚಿತ ದುಷ್ಕರ್ಮಿಗಳು 2 ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ, ಅವರ ಮನೆಯಿಂದ ಅಪಹರಿಸಿ ನರಬಾರಿ ಎಂಬ ಸ್ಥಳಕ್ಕೆ ಕರೆದೊಯ್ದು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಪ್ರಜ್ಞೆ ತಪ್ಪಿದ್ದ ಅವರನ್ನು ಬಳಿಕ ಅವರ ಮನೆ ಬಳಿ ಬಿಟ್ಟು ಹೋಗಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಭಾವೇಶ್ ರಾಯ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.

ಈ ಹತ್ಯೆಯ ಬಳಿಕ ಭಾರತದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಇದು ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಹಿಂಸಾಚಾರದ ಇನ್ನೊಂದು ಉದಾಹರಣೆ. ಆರೋಪಿಗಳು ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ. ಬಾಂಗ್ಲಾ ಮಧ್ಯಂತರ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಬೇಕು,” ಎಂದು ಆಗ್ರಹಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ, ಮುಖ್ಯವಾಗಿ ಹಿಂದೂಗಳ ಮೇಲೆ ದಾಳಿ,  ದೇವಾಲಯಗಳ ಧ್ವಂಸದಂತಹ ಘಟನೆಗಳು ತೀವ್ರಗೊಳ್ಳುತ್ತಲೇ ಇವೆ.

ಈ ಹತ್ಯೆ ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ರಕ್ಷಣೆಗೆ ಮೋದಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್‌ಮಾಡಿ, “ಭಾವೇಶ್‌ ಚಂದ್ರ ರಾಯ್‌ ಅವರ ಭೀಕರ ಹತ್ಯೆ, ಬಾಂಗ್ಲಾದ ಮಧ್ಯಂತರ ಸರ್ಕಾರದ ಜತೆಗೆ ಪ್ರಧಾನಿ ಮೋದಿ ನಡೆಸಿದ ಮಾತುಕತೆಯ ವೈಫಲ್ಯಕ್ಕೆ ಸಾಕ್ಷಿ,” ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕೂಡ ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಬಾಂಗ್ಲಾದಲ್ಲಿರುವ ಹಿಂದೂ ಸಮುದಾಯದ ಜೊತೆ ಕಾಂಗ್ರೆಸ್‌ ಸದುದ್ದೇಶದ ಭಾವನೆಯಿಂದ ನಿಲ್ಲುತ್ತದೆ. ಅಲ್ಪಸಂಖ್ಯಾತರ ರಕ್ಷಣೆಗೆ ಭಾರತ ತನ್ನ ಧ್ವನಿ ಎತ್ತಬೇಕು,” ಎಂದು ಹೇಳಿದ್ದಾರೆ.

Exit mobile version