ಉತ್ತರ ಪ್ರದೇಶ: ಬಲ್ಲಿಯಾದಲ್ಲಿ ನಡೆದ ಭೀಕರ ಕೊಲೆಯ ಘಟನೆಯೊಂದು ದೇಶಾದ್ಯಂತ ಆತಂಕ ಮೂಡಿಸಿದೆ. 44 ವರ್ಷದ ಮಾಯಾದೇವಿ ಎಂಬ ಮಹಿಳೆ, ತನ್ನ ಪ್ರಿಯಕರ ಹಾಗೂ ಇತರ ಇಬ್ಬರ ಸಹಾಯದಿಂದ ತನ್ನ 62 ವರ್ಷದ ಮಾಜಿ ಸೈನಿಕ ಪತಿ ದೇವೇಂದ್ರ ಕುಮಾರ್‌ನನ್ನು ಕೊಂದು, ಆತನ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ, ಗುರುತು ಮರೆಮಾಚಲು ವಿವಿಧ ಸ್ಥಳಗಳಲ್ಲಿ ಎಸೆದಿದ್ದಾಳೆ. ಈ ಘಟನೆಯು ಶನಿವಾರ ಬೆಳಕಿಗೆ ಬಂದಿದ್ದು, ಸಿಕಂದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖರೀದ್ ಗ್ರಾಮದ ಬಳಿಯ ಹೊಲದಲ್ಲಿ ಪಾಲಿಥಿನ್‌ನಲ್ಲಿ ಕೈ-ಕಾಲುಗಳು ಪತ್ತೆಯಾಗಿವೆ.
ಮಾಯಾದೇವಿ ತನ್ನ ಪತಿಯ ಕೊಲೆಯನ್ನು ಮರೆಮಾಚಲು, ಮೇ 10 ರಂದು ಬಲ್ಲಿಯಾ ನಗರ ಕೊಟ್ಬಾಲಿ ಪೊಲೀಸ್ ಠಾಣೆಯಲ್ಲಿ ದೇವೇಂದ್ರ ಕುಮಾರ್ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಳು. ಆದರೆ, ಆಕೆಯ ಸ್ವಂತ ಮಗಳು ಅಂಬ್ಲಿ ಗೌತಮ್, ತಾಯಿಯ ವಿರುದ್ಧ ಸಾಕ್ಷ್ಯ ನೀಡಿ, ತಂದೆಯ ಕೊಲೆಯ ಆರೋಪವನ್ನು ಮಾಯಾದೇವಿಯ ಮೇಲೆ ಹೊರಿಸಿದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ಮಾಯಾದೇವಿಯನ್ನು ಬಂಧಿಸಿ, ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದರು.
ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾಯಾದೇವಿ ತನ್ನ ಪ್ರಿಯಕರ ಅನಿಲ್ ಯಾದವ್ , ಮಿಥಿಲೇಶ್ ಪಟೇಲ್ ಹಾಗೂ ಸತೀಶ್ ಯಾದವ್ ಎಂಬುವರ ಸಹಾಯದಿಂದ ಈ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿಸಿದರು. ಪೊಲೀಸರ ತನಿಖೆಯಲ್ಲಿ, ಮಾಯಾದೇವಿಯ ಅನಿಲ್ ಯಾದವ್ ಜೊತೆಗಿನ ಸಂಬಂಧವೇ ಈ ಕೊಲೆಗೆ ಪ್ರಮುಖ ಕಾರಣವೆಂದು ಬಯಲಾಗಿದೆ. ಮಿಥಿಲೇಶ್ ಪಟೇಲ್‌ನನ್ನು ಸೋಮವಾರ ಬಂಧಿಸಲಾಗಿದ್ದು, ಅನಿಲ್ ಯಾದವ್ ಮತ್ತು ಸತೀಶ್ ಯಾದವ್‌ನನ್ನು ಮಂಗಳವಾರ ಬಂಧಿಸಲಾಯಿತು.
