ಕಾಠ್ಮಂಡು: ನೇಪಾಳದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ರಾಜಕೀಯ ಬದಲಾವಣೆ ಕಂಡುಬಂದಿದ್ದು, ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಮಾಜಿ ಕಾಠ್ಮಂಡು ಮೇಯರ್ ಹಾಗೂ ಯುವ ನಾಯಕ ಬಲೇಂದ್ರ ಶಾ (Balen Shah) ಅವರ ಹೊಸ ರಾಜಕೀಯ ಪಕ್ಷವಾದ ಆರ್‌ಎಸ್‌ಪಿ (RSP) ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದು, ದೇಶದ ಗಮನ ಸೆಳೆದಿದೆ..
ಮಾ.7ರ ತನಕ ಲಭ್ಯವಾಗಿರುವ ಚುನಾವಣಾ ಫಲಿತಾಂಶಗಳ ಪ್ರಕಾರ, ನೇಪಾಳದ 165 ನೇರ ಚುನಾವಣಾ ಕ್ಷೇತ್ರಗಳ ಪೈಕಿ 161 ಕ್ಷೇತ್ರಗಳ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಆರ್‌ಎಸ್‌ಪಿ ಈಗಾಗಲೇ 6 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಸುಮಾರು 110 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಟ್ರೆಂಡ್ ಮುಂದುವರೆದರೆ, ಬಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕು ಬಾರಿ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಓಲಿ ಅವರ ವಿರುದ್ಧ ಬಲೇಂದ್ರ ಶಾ ಭಾರೀ ಮುನ್ನಡೆ ಸಾಧಿಸಿದ್ದಾರೆ. ಝಾಪಾ-5 ಕ್ಷೇತ್ರದಲ್ಲಿ ನಡೆದ ಮತ ಎಣಿಕೆಯಲ್ಲಿ ಬಲೇನ್ ಶಾ 15,000ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರೆ, ಓಲಿ ಕೇವಲ 3,300 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.
ಬಲೇಂದ್ರ ಶಾ ಅವರ ಜನಪ್ರಿಯತೆ ಏರಿಕೆಗೆ ಹಲವು ಕಾರಣಗಳಿವೆ. ಅವರು ಕೇವಲ ರಾಜಕೀಯ ನಾಯಕನಷ್ಟೇ ಅಲ್ಲದೆ ರಾಪರ್, ಇಂಜಿನಿಯರ್ ಮತ್ತು ಸಮಾಜಮುಖಿ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ. ಯುವಕರೊಂದಿಗೆ ನೇರ ಸಂಪರ್ಕ ಹೊಂದಿರುವ ಅವರ ವ್ಯಕ್ತಿತ್ವವು ಅವರನ್ನು ಜನಪ್ರಿಯ ನಾಯಕನನ್ನಾಗಿ ಮಾಡಿದೆ.
ಬಲೇಂದ್ರ ಶಾ ಅವರಿಗೆ ಕರ್ನಾಟಕದೊಂದಿಗೆ ವಿಶೇಷ ಸಂಬಂಧವೂ ಇದೆ. ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಬಳಿಕ ಅಲ್ಲಿಯೇ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿಯನ್ನು ಪಡೆದುಕೊಂಡರು. 2016 ರಿಂದ 2018ರ ಅವಧಿಯಲ್ಲಿ ಅವರು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು.
ಕಳೆದ ವರ್ಷ ನೇಪಾಳದಲ್ಲಿ ನಡೆದ ‘ಜೆನ್-ಜಿ’ ಪ್ರತಿಭಟನೆಗಳು ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದವು. ಯುವಜನತೆ ಭ್ರಷ್ಟಾಚಾರ, ಆಡಳಿತದ ಅಸಮರ್ಥತೆ ಮತ್ತು ರಾಜಕೀಯ ಅಸ್ಥಿರತೆಯ ವಿರುದ್ಧ ಕಠಿಣವಾಗಿ ಧ್ವನಿ ಎತ್ತಿತ್ತು. ಅದರ ಪರಿಣಾಮವೇ ಈ ಚುನಾವಣೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಕಳೆದ 18 ವರ್ಷಗಳಲ್ಲಿ ನೇಪಾಳದಲ್ಲಿ 14 ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಈ ನಿರಂತರ ರಾಜಕೀಯ ಅಸ್ಥಿರತೆಯಿಂದ ಜನರು ಬೇಸತ್ತು ಹೋಗಿದ್ದರು. ಸ್ಥಾಪಿತ ರಾಜಕೀಯ ಪಕ್ಷಗಳ ಮೇಲೆ ಜನರ ವಿಶ್ವಾಸ ಕಡಿಮೆಯಾಗಿದೆ.
