ಅಯೋಧ್ಯೆ, ನವೆಂಬರ್ 24: ಕಳೆದ ವರ್ಷ ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಅಯೋಧ್ಯಾ ಶ್ರೀ ರಾಮ ಮಂದಿರ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಿದ್ಧವಾಗಿದೆ. ನಾಳೆ (ನವೆಂಬರ್ 25) ಮಾರ್ಗಶಿರ ಮಾಸದ ಶುಕ್ಲ ಪಂಚಮಿ, ಶ್ರೀ ರಾಮ-ಸೀತೆಯ ವಿವಾಹ ಪಂಚಮಿಯ ಶುಭ ಅಭಿಜಿತ್ ಮುಹೂರ್ತದಲ್ಲಿ ದೇವಾಲಯದ ಶಿಖರದ ಮೇಲೆ ಧ್ವಜಾರೋಹಣ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಧ್ವಜ ಏರಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಅಯೋಧ್ಯೆ ನಗರ ಸದ್ಯ ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ರಸ್ತೆಗಳು, ಚೌಕಗಳು, ಮಂದಿರದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪ್ರವೇಶ ದ್ವಾರಗಳು ಕಳೆಗಟ್ಟಿದ್ದು, ಯಾತ್ರಾರ್ಥಿಗಳು ಹಾಗೂ ಭಕ್ತರ ಆಗಮನದಿಂದ ಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ದೀಪಗಳನ್ನು ಬೆಳಗಿಸಲಾಗಿದ್ದು, ದೇವಸ್ಥಾನದ ಸುತ್ತಲೂ ಭವ್ಯ ಅಲಂಕಾರ ಮಾಡಲಾಗಿದೆ.
22 ಅಡಿ ಉದ್ದದ ಧಾರ್ಮಿಕ ಧ್ವಜ
ಈ ಸಂದರ್ಭದಲ್ಲಿ ಏರಿಸಲಾದ ಕೇಸರಿ ಬಣ್ಣದ ಧ್ವಜವು 22 ಅಡಿ ಉದ್ದ ಮತ್ತು 11 ಅಡಿ ಎತ್ತರ ಹೊಂದಿದೆ. ಹಿಂದೂ ಸಂಪ್ರದಾಯದಲ್ಲಿ ಧ್ವಜಾರೋಹಣವು ಧರ್ಮದ ವಿಜಯ ಎಂದು ಹೇಳಲಾಗುತ್ತದೆ. ಧ್ವಜದ ಮದ್ಯದಲ್ಲಿ ಸೂರ್ಯನ ಆಕೃತಿ ಮತ್ತು ಅದರ ಮೇಲೆ ‘ಓಂ’ ಅಕ್ಷರ ಕೆತ್ತಲಾಗಿದೆ. ಈ ಸಂಕೇತಗಳು ಭಗವಾನ್ ರಾಮನ ತೇಜಸ್ಸು, ಶೌರ್ಯ ಹಾಗೂ ವೈಭವವನ್ನು ಪ್ರತಿಬಿಂಬಿಸುತ್ತವೆ.
ಧ್ವಜಾರೋಹಣಕ್ಕಾಗಿ ಕಳೆದ ಕೆಲ ದಿನಗಳಿಂದ ಅಯೋಧ್ಯೆಯಲ್ಲಿ ವಿಶೇಷ ಹೋಮ-ಹವನಗಳು ನಡೆಯುತ್ತಿದೆ. ಸ್ಥಳೀಯ ಪುರೋಹಿತರು, ವೇದ ಪಂಡಿತರು ಮತ್ತು ವಿವಿಧ ಮಠದ ಪ್ರತಿನಿಧಿಗಳು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಈ ಧ್ವಜಾರೋಹಣ ಮಾರ್ಗಶಿರ ಮಾಸದ ಶುಕ್ಲ ಪಕ್ಷ ಪಂಚಮಿಯ ಪವಿತ್ರ ದಿನ, ಶ್ರೀರಾಮ–ಮಾತಾ ಸೀತೆಯ ವಿವಾಹ ಪಂಚಮಿಯ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ. ಇದೇ ದಿನ 9ನೇ ಸಿಖ್ ಗುರು, ಗುರು ತೇಜ್ ಬಹದ್ದೂರ್ ಜಿ ಅವರ ಹುತಾತ್ಮ ದಿನವೂ ಆಗಿದ್ದು, ಅವರಿಗೆ ಅಯೋಧ್ಯೆಯೊಂದಿಗೆ ವಿಶೇಷ ನಂಟಿದೆ. 17ನೇ ಶತಮಾನದಲ್ಲಿ ಗುರು ತೇಜ್ ಬಹದ್ದೂರ್ ಅವರು 48 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಧ್ಯಾನ ಮಾಡಿದ್ದರೆಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ.
ಯಾತ್ರಾರ್ಥಿಗಳು ಹೆಚ್ಚುತ್ತಿರುವ ಹಿನ್ನೆಲೆ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಭಾರಿ ವಾಹನಗಳ ಪ್ರವೇಶವನ್ನು ಈಗಾಗಲೇ ನಿಷೇಧಿಸಲಾಗಿದ್ದು, ಮುಖ್ಯ ಮಾರ್ಗಗಳಲ್ಲಿ ಸಂಚಾರ ನಿಯಂತ್ರಿಸಲಾಗಿದೆ. ದೇವಸ್ಥಾನದ ಸಮೀಪ ಡ್ರೋನ್ ವ್ಯವಸ್ಥೆ, ಹೆಚ್ಚುವರಿ ಪೊಲೀಸ್ ಪಡೆ ಮತ್ತು ಕ್ಯೂಆರ್-ಟೀಮ್‌ಗಳನ್ನು ನಿಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಗಣ್ಯರು ಭಾಗವಹಿಸುವ ಹಿನ್ನೆಲೆಯಲ್ಲಿ ಟ್ರಸ್ಟ್ ಮತ್ತು ಸರ್ಕಾರ ಜಂಟಿಯಾಗಿ ಸಮಗ್ರ ಭದ್ರತಾ ಯೋಜನೆ ರೂಪಿಸಿದೆ. RSS ಪ್ರಮುಖರಾದ ಮೋಹನ್ ಭಾಗವತ್ ಸೇರಿದಂತೆ ಅನೇಕ ಧಾರ್ಮಿಕ–ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
