ಮುಂಬೈ: ದೇಶಾದ್ಯಂತ ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಹೋರಾಟ ತೀವ್ರಗೊಂಡಿದೆ. ಮುಂಬೈನಲ್ಲಿ ನಡೆದ ಪ್ರತಿಭಟನೆ ವೇಳೆ ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಸೀಸನ್ 17ರ ಖ್ಯಾತಿಯ ಆಯಿಷಾ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಯಿಷಾ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, “ಯಾವುದೇ ಪ್ರತಿಭಟನೆ ಆರಂಭಿಸುವ ಮುನ್ನವೇ ಪೊಲೀಸರು ನಮ್ಮನ್ನು ಬಲವಂತವಾಗಿ ವ್ಯಾನ್‌ಗೆ ಹತ್ತಿಸಿ ವಶಕ್ಕೆ ಪಡೆದರು” ಎಂದು ಆರೋಪಿಸಿದ್ದಾರೆ.
ಮುಂಬೈನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನೀಟ್ ಹೋರಾಟಕ್ಕೆ ಐಕ್ಯತೆ ಸೂಚಿಸುವ ಉದ್ದೇಶದಿಂದ ಅನೇಕ ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಇದೇ ವೇಳೆ ತಮ್ಮ ಸಹೋದರ ಹಾಗೂ ಸ್ನೇಹಿತರೊಂದಿಗೆ ಆಯಿಷಾ ಖಾನ್ ಕೂಡ ಸ್ಥಳಕ್ಕೆ ಬಂದಿದ್ದರು.
ಆಯಿಷಾ ಖಾನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಭಾವುಕರಾಗಿ ಮಾತನಾಡಿದ್ದು, “ನನ್ನ ಕೈಗಳು ಈಗಲೂ ನಡುಗುತ್ತಿವೆ. ನಾವು ಯಾವುದೇ ಘೋಷಣೆ ಕೂಗಿರಲಿಲ್ಲ. ಪ್ರತಿಭಟನೆ ಆರಂಭಿಸಿರಲಿಲ್ಲ. ರಸ್ತೆ ಬದಿಯಲ್ಲಿ ಶಾಂತಿಯುತವಾಗಿ ನಿಂತಿದ್ದೆವು. ಆದರೂ ಸುಮಾರು 15ಕ್ಕೂ ಹೆಚ್ಚು ಪೊಲೀಸರು ನಮ್ಮನ್ನು ಸುತ್ತುವರಿದು ಪೊಲೀಸ್ ವ್ಯಾನ್‌ಗೆ ಕೂರಿಸಿದರು” ಎಂದು ಹೇಳಿದ್ದಾರೆ.
Ayesha Khan detained by Mumbai Police for participating in a protest where no permission had been granted.🚨
Wait for that Verbal Fight between Ayesha and inspector
Ayesha : mein side mein khadi hu.
You guys are pulling me . Don’t pull me in van.Inspector: Very good
Ayesha… pic.twitter.com/LOs4RMXXma
— Jeet (@JeetN25) July 22, 2026
ಅವರು ಹೇಳುವ ಪ್ರಕಾರ, ಸಂಜೆ ಸುಮಾರು 4 ಗಂಟೆ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ತಲುಪಿದಾಗ, ತಮ್ಮ ಸಹೋದರ ಹಾಗೂ ಸ್ನೇಹಿತರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು. ನಂತರ ತಾವು ಮತ್ತು ಇಬ್ಬರು ಗೆಳತಿಯರು ರಸ್ತೆ ಬದಿಯಲ್ಲಿ ನಿಂತಿದ್ದಾಗ ಯಾವುದೇ ಮುನ್ನೆಚ್ಚರಿಕೆ ಅಥವಾ ಸ್ಪಷ್ಟನೆ ನೀಡದೇ ಪೊಲೀಸರ ತಂಡ ಅವರನ್ನು ವಶಕ್ಕೆ ಪಡೆದಿದೆ ಎಂದು ಆರೋಪಿಸಿದ್ದಾರೆ.
“ನಾವು ಯಾವ ಕಾನೂನು ಉಲ್ಲಂಘಿಸಿದ್ದೇವೆ? ಕೇವಲ ರಸ್ತೆ ಬದಿಯಲ್ಲಿ ನಿಂತಿದ್ದರೆ ಅದು ಅಪರಾಧವೇ? ನಾವು ಪ್ರತಿಭಟನೆ ಆರಂಭಿಸದೇ ಇದ್ದಾಗಲೇ ವಶಕ್ಕೆ ಪಡೆಯುವ ಅಗತ್ಯವೇನು?” ಎಂದು ಆಯಿಷಾ ಖಾನ್ ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಪೊಲೀಸರ ಕ್ರಮವನ್ನು ಪ್ರಶ್ನಿಸಿದರೆ, ಕೆಲವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಕ್ರಮ ಕೈಗೊಂಡಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳ ವಿರುದ್ಧ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಬೆಂಬಲ ಸೂಚಿಸುತ್ತಿದ್ದು, ಬಾಲಿವುಡ್ ಹಾಗೂ ಕಿರುತೆರೆ ಕಲಾವಿದರೂ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈ ಪ್ರತಿಭಟನೆಯಲ್ಲೂ ಇದೇ ಉದ್ದೇಶದಿಂದ ಆಯಿಷಾ ಖಾನ್ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
