ಭಾರೀ ಮಳೆಗೆ ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: 9 ಜನರ ಸಾ*ವು

11 (49)

ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಮಳೆಯ ಆರ್ಭಟಕ್ಕೆ ತತ್ತರಿಸುತ್ತಿವೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ಅರುಣಾಚಲ ಪ್ರದೇಶದಲ್ಲಿ ಭಾರಿ ಗುಡ್ಡ ಕುಸಿತ ಸಂಭವಿಸಿದ್ದು, 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಆಸ್ತಿ ನಷ್ಟ ಸಂಭವಿಸಿದೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಈಸ್ಟ್ ಕಮಾಂಗ್ ಜಿಲ್ಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದೆ. ಇಲ್ಲಿ ಬೃಹತ್ ಗುಡ್ಡ ಕುಸಿದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಗುಡ್ಡ ಕುಸಿದು ಬಿದ್ದಿದ್ದು, ರಸ್ತೆಯ ಮೇಲಿದ್ದ ವಾಹನಗಳು ಮಣ್ಣಿನಲ್ಲಿ ಮುಳುಗಿದಿವೆ. ಕೆಲವು ವಾಹನಗಳು ನದಿಗೆ ಉರುಳಿವೆ ಎಂಬ ಶಂಕೆಯೂ ಇದೆ.

ಇನ್ನೊಂದೆಡೆ ಲೋವರ್ ಸುಬನ್ಸುರಿ ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಪ್ರದೇಶದ ಕೆಲ ಮನೆಗಳು ಸಂಪೂರ್ಣವಾಗಿ ಮಣ್ಣಿನಡಿ ಹೂತು ಹೋಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿಯ ವಾತಾವರಣ ಮನೆ ಮಾಡಿದೆ.

ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಮಣ್ಣಿನಡಿ ಸಿಲುಕಿರುವವರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಳೆ ಮತ್ತು ಕೆಸರು ನೀರಿನ ಕಾರಣದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

ಅರುಣಾಚಲ ಪ್ರದೇಶದ ಹಲವೆಡೆ ರಸ್ತೆಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಆಹಾರ, ಔಷಧಿ, ದೈನಂದಿನ ಅಗತ್ಯ ವಸ್ತುಗಳ ಪೂರೈಕೆಗೆ ಅಡಚಣೆ ಉಂಟಾಗಿದೆ. ಪ್ರವಾಹ ಪರಿಸ್ಥಿತಿಗೂ ಜನರು ಸಿಲುಕುವ ಅಪಾಯವಿದೆ. ಮುನ್ಸೂಚನೆಯಂತೆ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಸಾಧ್ಯವಿದೆ ಎಂದು ಎಚ್ಚರಿಕೆ ನೀಡಿದೆ.

ಸರಕಾರದ ಕ್ರಮಗಳು ಮತ್ತು ಎಚ್ಚರಿಕೆ

ಅರುಣಾಚಲ ಪ್ರದೇಶ ಸರ್ಕಾರ ತುರ್ತು ಸಭೆ ನಡೆಸಿದ್ದು, ಹಾನಿಯಾದ ಪ್ರದೇಶಗಳಿಗೆ ಹೆಚ್ಚಿನ NDRF ತಂಡಗಳ ನಿಯೋಜನೆ ಮಾಡಲಾಗಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರವಾಸಿಗರಿಗೆ ಈ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

Exit mobile version