BREAKING: ಆಂಧ್ರಪ್ರದೇಶದ ಚಿಂತೂರು ಘಾಟ್‌ನಲ್ಲಿ ಕಂದಕಕ್ಕೆ ಉರುಳಿದ ಬಸ್, 10ಕ್ಕೂ ಹೆಚ್ಚು ಮಂದಿ ಸಾ*ವು

Untitled design 2025 12 12T084418.658

ವಿಜಯವಾಡ: ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಪ್ರಯಾಣಿಕ ಬಸ್ ನಿಯಂತ್ರಣ ತಪ್ಪಿ ಚಿಂತೂರು-ಮರೇಡುಮಿವಿನ ಘಾಟ್ ರಸ್ತೆಯಲ್ಲಿ ಆಳವಾದ ಕಂದಕಕ್ಕೆ ಉರುಳಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 10 ಜನರು ದಾರುಣವಾಗಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರದೃಷ್ಟಕರ ಘಟನೆಯಲ್ಲಿ ಇಬ್ಬರು ಚಾಲಕರು ಸೇರಿದಂತೆ ಒಟ್ಟು 37 ಜನ ಪ್ರಯಾಣಿಸುತ್ತಿತ್ತು. ಇವರೆಲ್ಲರೂ ಚಿತ್ತೂರು ಜಿಲ್ಲೆಯವರಾಗಿದ್ದು, ಧಾರ್ಮಿಕ ಯಾತ್ರೆ ಕೈಗೊಂಡಿದ್ದರು. ಇತ್ತೀಚೆಗೆ ಅವರು ಪ್ರಸಿದ್ಧ ಭದ್ರಾಚಲಂ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಮತ್ತೊಂದು ಪ್ರಮುಖ ಪುಣ್ಯಕ್ಷೇತ್ರವಾದ ಅನ್ನಾವರಂ (Annavaram) ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಘಾಟ್ ರಸ್ತೆಯಲ್ಲಿ ಸುಮಾರು 1:30 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ, ಘಟನೆ ನಡೆದ ಸ್ಥಳವು ತುಳಸಿಪಾಕ ಸಮೀಪದ 9ನೇ ಮೈಲಿಗಲ್ಲಿನ ಬಳಿ ಇದೆ. ರಸ್ತೆಯು ಅತ್ಯಂತ ಕಡಿದಾದ ಮತ್ತು ಅಪಾಯಕಾರಿ ತಿರುವುಗಳನ್ನು ಹೊಂದಿದ್ದು, ಚಾಲಕನಿಗೆ ತೀವ್ರವಾದ ವಕ್ರರಸ್ತೆಯನ್ನು ದಾಟಲು ಸಾಧ್ಯವಾಗಿಲ್ಲ. ಬಸ್ ನಿಯಂತ್ರಣ ಕಳೆದುಕೊಂಡು ಮೊದಲು ರಸ್ತೆಯ ಅಂಚಿನಲ್ಲಿದ್ದ ಸುರಕ್ಷತಾ ಗೋಡೆಗೆ ಡಿಕ್ಕಿ ಹೊಡೆದಿದೆ ಮತ್ತು ನಂತರ ಆಳವಾದ ಕಂದಕಕ್ಕೆ ಉರುಳಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳವು ಬೆಟ್ಟ ಪ್ರದೇಶದಲ್ಲಿದ್ದು, ಇದು ಮೊಬೈಲ್ ನೆಟ್‌ವರ್ಕ್ ಸಂಪರ್ಕದಿಂದ ಸಂಪೂರ್ಣವಾಗಿ ಹೊರಗಿದೆ. ಈ ಕಾರಣದಿಂದಾಗಿ, ತುರ್ತು ಸೇವೆಗಳು ಒದಗಿದಲು ಹೆಚ್ಚು ಸಮಯ ಬೇಕಾಯಿತು. ಇದರಿಂದ ಅಪಘಾತದಲ್ಲಿ ತೀವ್ರ ಸಾವು ನೋವು ಸಂಭವಿಸಿದೆ.

ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ, ರಕ್ಷಣಾ ಕಾರ್ಯಕರ್ತರು ಮತ್ತು ಪೊಲೀಸರು ಸಂಕಷ್ಟದಲ್ಲಿದ್ದ ಪ್ರಯಾಣಿಕರನ್ನು ಹೊರತರಲು ತೀವ್ರ ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.

ಇಲ್ಲಿಯವರೆಗೆ, ರಕ್ಷಣಾ ತಂಡಗಳು ಅಪಘಾತ ಸ್ಥಳದಿಂದ 9 ಮೃತದೇಹಗಳನ್ನು ಹೊರತೆಗೆದಿವೆ. ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣವೇ ಚಿಂತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗತ್ಯವಿದ್ದಲ್ಲಿ ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಹೆಚ್ಚಿನ ವೈದ್ಯಕೀಯ ಸಿಬ್ಬಂಧಿಗಳನ್ನ ನೇಮಿಸಲಾಗಿದೆ.

ಘಟನೆಯ ನಂತರ, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು (SP), ಮತ್ತು ಇತರೆ ಹಿರಿಯ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ.

Exit mobile version