ಬಿಜೆಪಿ ಬಿಟ್ಟು ಹೊಸ ಪಕ್ಷ ಕಟ್ತಾರಾ ಅಣ್ಣಾಮಲೈ..? ತಮಿಳುನಾಡು ರಾಜಕೀಯದಲ್ಲಿ ಸಂಚಲನ..!

Untitled design 2026 06 01T203148.653

ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಬಿಜೆಪಿ ತೊರೆದು ಹೊಸ ರಾಜಕೀಯ ಪಕ್ಷ ಆರಂಭಿಸಲಿದ್ದಾರೆ ಎಂಬ ಊಹಾಪೋಹಗಳು ಜೋರಾಗಿರುವ ನಡುವೆ ಅಣ್ಣಾಮಲೈ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿ ಪ್ರವಾಸ ಕೈಗೊಂಡಿರುವ ಅಣ್ಣಾಮಲೈ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, “ದಯವಿಟ್ಟು ಸ್ವಲ್ಪ ಕಾಯಿರಿ. ಇನ್ನೆರಡು ದಿನಗಳಲ್ಲಿ ಎಲ್ಲದರ ಬಗ್ಗೆ ಮಾತನಾಡುತ್ತೇವೆ” ಎಂದು ಹೇಳುವ ಮೂಲಕ ಹಲವು ಪ್ರಶ್ನೆಗಳಿಗೆ ನೇರ ಉತ್ತರ ನೀಡದೆ ಕುತೂಹಲ  ಮೂಡಿಸಿದ್ದಾರೆ.

ತಮಿಳುನಾಡು ರಾಜಕೀಯ ವಲಯಗಳಲ್ಲಿ ಅಣ್ಣಾಮಲೈ ಅವರು 2026ರ ವಿಧಾನಸಭೆ ಚುನಾವಣೆಯ ಬಳಿಕ ಹೊಸ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡಬಹುದು ಎಂಬ ಚರ್ಚೆಗಳು ಕೆಲ ದಿನಗಳಿಂದ ನಡೆಯುತ್ತಿವೆ. ಇದರ ನಡುವೆ ಅವರ ಜನ್ಮದಿನದ ಅಂಗವಾಗಿ ಕೊಯಮತ್ತೂರಿನ ವಿವಿಧ ಭಾಗಗಳಲ್ಲಿ ಬೆಂಬಲಿಗರು ಅಳವಡಿಸಿರುವ ಬೃಹತ್ ಪೋಸ್ಟರ್‌ಗಳು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿವೆ.

“ನಮ್ಮ ನಾಯಕ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ” ಎಂಬ ಘೋಷಣೆಯಿರುವ ಪೋಸ್ಟರ್‌ಗಳು ಅಣ್ಣಾಮಲೈ ಬೆಂಬಲಿಗರ ಶಕ್ತಿ ಪ್ರದರ್ಶನವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಬೆಳವಣಿಗೆಗಳ ನಡುವೆ ಅಣ್ಣಾಮಲೈ ತಮ್ಮ ಭವಿಷ್ಯದ ಕುರಿತು ಯಾವುದೇ ಸ್ಪಷ್ಟನೆ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡದ ಹಿನ್ನೆಲೆಯಲ್ಲಿ ಅಣ್ಣಾಮಲೈ ಪಕ್ಷದೊಳಗಿನ ತಮ್ಮ ಭವಿಷ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. 234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಇನ್ನೊಂದೆಡೆ, ಅಣ್ಣಾಮಲೈ ಅವರಿಗೆ ರಾಜ್ಯಸಭಾ ಸದಸ್ಯತ್ವದ ಅವಕಾಶ ನೀಡಲಾಗಿತ್ತು ಎಂಬ ವರದಿಗಳೂ ಕೇಳಿಬಂದಿವೆ. ಆದರೆ ಅವರು ಅದನ್ನು ಒಪ್ಪಲಿಲ್ಲ ಎನ್ನುವ ಮಾಹಿತಿಯೂ ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಅಣ್ಣಾಮಲೈ ಮೊದಲಿಗೆ ಒಂದು ಜನಚಳವಳಿಯನ್ನು ಆರಂಭಿಸಿ ಬಳಿಕ ಅದನ್ನು ರಾಜಕೀಯ ಪಕ್ಷವಾಗಿ ರೂಪಿಸುವ ಸಾಧ್ಯತೆಯಿದೆ.

ಈ ಹೊಸ ಉಪಕ್ರಮವು ಸಮಾಜದ ವಿವಿಧ ಕ್ಷೇತ್ರಗಳ ಸಮಾನ ಮನಸ್ಕ ವ್ಯಕ್ತಿಗಳನ್ನು ಒಗ್ಗೂಡಿಸಿ ಬಲಿಷ್ಠ ಸ್ವಯಂಸೇವಕರ ಜಾಲವನ್ನು ನಿರ್ಮಿಸುವ ಗುರಿ ಹೊಂದಿರಬಹುದು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅವರು “We The Leaders” ಎಂಬ ನಾಯಕತ್ವ ಅಭಿವೃದ್ಧಿ ಸಂಸ್ಥೆಯನ್ನು ನಡೆಸುತ್ತಿದ್ದು, ಅದು ಮುಂದಿನ ರಾಜಕೀಯ ವೇದಿಕೆಗೆ ಅಡಿಪಾಯವಾಗುವ ಸಾಧ್ಯತೆಯಿದೆ.

2020ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಅಣ್ಣಾಮಲೈ, ಅಲ್ಪಾವಧಿಯಲ್ಲೇ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು. 2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು ರಾಜ್ಯಾದ್ಯಂತ ಆಕ್ರಮಣಕಾರಿ ಪ್ರಚಾರ, ಜನಸಂಪರ್ಕ ಯಾತ್ರೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆದರೆ 2026ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸದಿರುವುದು ಮತ್ತು ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿ-ಎಐಎಡಿಎಂಕೆ ಮೈತ್ರಿ ಪುನರುಜ್ಜೀವನದ ಬಳಿಕ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಲಾಗಿತ್ತು ಎಂಬ ವರದಿಗಳೂ ಹರಿದಾಡಿದ್ದವು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅಣ್ಣಾಮಲೈ ಮುಂದಿನ ಎರಡು ದಿನಗಳಲ್ಲಿ ಯಾವ ನಿರ್ಧಾರವನ್ನು ಪ್ರಕಟಿಸುತ್ತಾರೆ ಎಂಬುದರ ಮೇಲೆ ತಮಿಳುನಾಡು ರಾಜಕೀಯದ ಗಮನ ನೆಟ್ಟಿದೆ. ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಾರೆಯೇ ಅಥವಾ ಹೊಸ ರಾಜಕೀಯ ಅಧ್ಯಾಯ ಆರಂಭಿಸುತ್ತಾರೆಯೇ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ.

Exit mobile version