ತಿರುಪತಿ ಲಡ್ಡು ವಿವಾದ: ಬಾತ್‌ರೂಮ್ ಕೆಮಿಕಲ್ ಬಳಸಿ ತುಪ್ಪ ತಯಾರಿ-ಚಂದ್ರಬಾಬು ನಾಯ್ಡು

Untitled design 2026 02 06T232759.526

ಅಮರಾವತಿ: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (TTD) ಲಡ್ಡು ಪ್ರಸಾದದ ಕಲಬೆರಕೆ ವಿಚಾರ ಈಗ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದಿನ ವೈಎಸ್‌ಆರ್‌ಸಿಪಿ (YSRCP) ಸರ್ಕಾರದ ಅವಧಿಯಲ್ಲಿ ಸ್ನಾನಗೃಹಗಳನ್ನು (Bathroom) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ತುಪ್ಪವನ್ನು ಲಡ್ಡು ಪ್ರಸಾದಕ್ಕೆ ಬಳಸಲಾಗಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಕರ್ನೂಲ್ ಜಿಲ್ಲೆಯ ಕಲುಗುಟ್ಲಾದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಹಿಂದಿನ ಸರ್ಕಾರವು ವೆಂಕಟೇಶ್ವರ ಸ್ವಾಮಿಯ ಭಕ್ತರ ನಂಬಿಕೆಯೊಂದಿಗೆ ಆಟವಾಡಿದೆ. ಸ್ನಾನಗೃಹ ಸ್ವಚ್ಛಗೊಳಿಸುವ ಕೆಮಿಕಲ್‌ಗಳಿಂದ ತಯಾರಿಸಿದ ತುಪ್ಪವನ್ನು ಲಡ್ಡುಗಳಲ್ಲಿ ಬಳಸುವ ಮೂಲಕ ದೇಗುಲದ ಪವಿತ್ರತೆಗೆ ಧಕ್ಕೆ ತಂದಿದೆ. ಇದು ದೇವರ ವಿರುದ್ಧ ಮಾಡಿದ ಅತ್ಯಂತ ದೊಡ್ಡ ಪಾಪ ಎಂದು ಗುಡುಗಿದ್ದಾರೆ. ಕೇವಲ ತಿರುಪತಿ ಮಾತ್ರವಲ್ಲದೆ, ಶ್ರೀಶೈಲಂ ದೇವಸ್ಥಾನಕ್ಕೂ ಇಂತಹ ಕಲಬೆರಕೆ ತುಪ್ಪ ಪೂರೈಕೆಯಾಗಿತ್ತು ಎಂದು ಅವರು ದೂರಿದ್ದಾರೆ.

ತನಿಖಾ ವರದಿಗಳಲ್ಲಿ ಏನಿದೆ ?

ಈ ಹಗರಣದ ಬಗ್ಗೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (SIT) ಈಗಾಗಲೇ ತನಿಖೆ ಪೂರ್ಣಗೊಳಿಸಿದೆ. ತನಿಖೆಯ ಪ್ರಮುಖ ಅಂಶಗಳು ಇಲ್ಲಿವೆ:

2019 ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ತುಪ್ಪ ಪೂರೈಸುವವರು ಲಾಭದ ಆಸೆಗೆ ಬಿದ್ದು ಭಕ್ತರ ಭಾವನೆಗಳಿಗೆ ದ್ರೋಹ ಎಸಗಿದ್ದಾರೆ. ಹಾಲಿನ ಉತ್ಪನ್ನಗಳ ಬದಲಿಗೆ ರಾಸಾಯನಿಕಗಳನ್ನು ಬಳಸಿರುವುದು ಅಕ್ಷಮ್ಯ ಅಪರಾಧ ಎಂದು ನಾಯ್ಡು ಹೇಳಿದ್ದಾರೆ. ಪ್ರಸ್ತುತ ತಮ್ಮ ಸರ್ಕಾರವು ತಿರುಮಲದ ಪಾವಿತ್ರ್ಯತೆಯನ್ನು ಮರುಸ್ಥಾಪಿಸುವ ಕೆಲಸ ಮಾಡಿದೆ ಮತ್ತು ಈಗಿನ ಲಡ್ಡು ಪ್ರಸಾದದ ರುಚಿ ಹಾಗೂ ಗುಣಮಟ್ಟಕ್ಕೂ ಹಿಂದಿನದ್ದಕ್ಕೂ ಭಾರಿ ವ್ಯತ್ಯಾಸವಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವರದಿಯು ಈಗ ಸಂಚಲನ ಮೂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

Exit mobile version