ವೆನೆಜುವೆಲಾ ಮೇಲೆ ಅಮೆರಿಕ ವಾಯುದಾಳಿ: ಅಧ್ಯಕ್ಷ ಮಡುರೊ ಬಂಧನಕ್ಕೆ ಭಾರತದ ಕಳವಳ

Untitled design 2026 01 04T214526.187

ನವದೆಹಲಿ: ದಕ್ಷಿಣ ಅಮೆರಿಕದ ಪ್ರಮುಖ ರಾಷ್ಟ್ರ ವೆನೆಜುವೆಲಾದಲ್ಲಿ ಶನಿವಾರ ನಡೆದ ದಿಢೀರ್ ಬೆಳವಣಿಗೆಗಳು ಇಡೀ ವಿಶ್ವವನ್ನು ಬೆಚ್ಚಿಬೀಳಿಸಿವೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರವನ್ನು ಪತನಗೊಳಿಸಿರುವ ಅಮೆರಿಕ ಸೇನೆ, ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ದಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪ್ರತಿಕ್ರಿಯಿಸಿದ್ದು, ವೆನೆಜುವೆಲಾದ ಜನರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾರತದ ಅಧಿಕೃತ ನಿಲುವು: ಶಾಂತಿಗೆ ಕರೆ

ವೆನೆಜುವೆಲಾದಲ್ಲಿನ ಪರಿಸ್ಥಿತಿಯನ್ನು ಭಾರತದ ವಿದೇಶಾಂಗ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಕಳವಳಕಾರಿಯಾಗಿವೆ. ಕಷ್ಟದ ಸಮಯದಲ್ಲಿ ನಾವು ವೆನೆಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಬೆಂಬಲವಾಗಿ ನಿಲ್ಲುತ್ತೇವೆ. ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಮುಖ್ಯವಾಗಿದ್ದು, ಸಮಸ್ಯೆಯನ್ನು ಸಂವಾದದ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ. ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಭಾರತೀಯ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ಅಮೆರಿಕದ ಮಿಂಚಿನ ದಾಳಿ ಮತ್ತು ಮಡುರೊ ಬಂಧನ

ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇಲೆ ಅಮೆರಿಕ ಶನಿವಾರ ವೆನೆಜುವೆಲಾ ಮೇಲೆ ಭೀಕರ ವಾಯುದಾಳಿ ನಡೆಸಿದೆ. ದೀರ್ಘಕಾಲದ ಬೆದರಿಕೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿದ್ದ ಮಡುರೊ ಅವರ ಆಡಳಿತವನ್ನು ಅಮೆರಿಕ ಕೇವಲ ಕೆಲವೇ ಗಂಟೆಗಳಲ್ಲಿ ಅಂತ್ಯಗೊಳಿಸಿದೆ.

ವಿಶೇಷವೆಂದರೆ, ಮಡುರೊ ಬಂಧನದ ಬಳಿಕ ಅಮೆರಿಕದ ನೌಕಾ ಹಡಗಿನಲ್ಲಿ ಅವರಿಗೆ ಕೈಕೋಳ ತೊಡಿಸಿರುವ ಫೋಟೋವನ್ನು ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಮಡುರೊ ಬಂಧನಕ್ಕೆ ಅಮೆರಿಕ 50 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಿತ್ತು.

ವೆನೆಜುವೆಲಾದಲ್ಲಿ ಬದಲಾದ ರಾಜಕೀಯ ಚಿತ್ರಣ

ಮಡುರೊ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೊರಿನಾ ಮಚಾದೊ ಸಂಭ್ರಮ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮಾರಿಯಾ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ. ಇದು ವೆನೆಜುವೆಲಾದ ಭವಿಷ್ಯದ ಆಡಳಿತದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

Exit mobile version