ಡಿಸೆಂಬರ್ 12ರಂದು ಅಯೋಧ್ಯೆಗೆ ಅಖಿಲೇಶ್ ಯಾದವ್ ಭೇಟಿ

Untitled design 2026 11 07T153551.187

ಲಕ್ನೋ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಡಿಸೆಂಬರ್ 12ರಂದು ಕುಟುಂಬ ಸಮೇತರಾಗಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಅವರು ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅಖಿಲೇಶ್ ಯಾದವ್ ಅವರೊಂದಿಗೆ ಪತ್ನಿ ಹಾಗೂ ಸಂಸದೆ ಡಿಂಪಲ್ ಯಾದವ್, ಪುತ್ರ ಮತ್ತು ಪುತ್ರಿ ಕೂಡ ಅಯೋಧ್ಯೆಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಮಮಂದಿರದಲ್ಲಿ ರಾಮಲಲ್ಲಾ ದರ್ಶನ

ಡಿಸೆಂಬರ್ 12ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಅಖಿಲೇಶ್ ಯಾದವ್ ಅವರು ಇಡೀ ದಿನ ಅಲ್ಲಿಯೇ ಕಳೆಯುವ ಸಾಧ್ಯತೆಯಿದೆ. ಮೊದಲು ರಾಮಜನ್ಮಭೂಮಿ ಮಂದಿರಕ್ಕೆ ತೆರಳಿ ಬಾಲರಾಮನ ದರ್ಶನ ಪಡೆಯಲಿದ್ದಾರೆ. ಬಳಿಕ ಪ್ರಸಿದ್ಧ ಹನುಮಾನ್‌ಗಢಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಅಯೋಧ್ಯೆಯಲ್ಲಿರುವ ಸಾಧು-ಸಂತರು ಹಾಗೂ ವಿವಿಧ ಮಠಗಳ ಮಹಂತರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ ಅವರೊಂದಿಗೆ ಪ್ರಸಾದ ಸ್ವೀಕರಿಸಲಿದ್ದಾರೆ ಎಂದು ಪವನ್ ಪಾಂಡೆ ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನೆಯ ನಂತರ ಮೊದಲ ಬಾರಿಗೆ ಅಖಿಲೇಶ್ ಯಾದವ್ ಅವರು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.

ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಅಖಿಲೇಶ್

2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ದೇಶದ ಹಲವು ರಾಜಕೀಯ ನಾಯಕರು, ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಚಿತ್ರರಂಗದ ಪ್ರಮುಖರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆದರೆ, ಅಂದು ನಡೆದ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಅಖಿಲೇಶ್ ಯಾದವ್ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆಯ ಬಳಿಕ ಅವರ ಮೊದಲ ಭೇಟಿಯು ವಿಶೇಷ ಗಮನ ಸೆಳೆಯುತ್ತಿದೆ.

Exit mobile version