ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದ ದಿಗ್ಗಜ, ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಜನವರಿ 28ರಂದು ಪುಣೆಯ ಬಾರಾಮತಿ ಬಳಿ ನಡೆದ ವಿಮಾನ ಅಪಘಾತವು ಕೇವಲ ತಾಂತ್ರಿಕ ದೋಷವಲ್ಲ, ಅದೊಂದು ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಆರೋಪಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೋಹಿತ್ ಪವಾರ್ ಅವರು ನೀಡಿರುವ ಈ ದೂರು ಇಡೀ ದೇಶದ ಗಮನ ಸೆಳೆದಿದೆ.
ರೋಹಿತ್ ಪವಾರ್ ಅವರ ದೂರಿನಲ್ಲಿರುವ ಅಂಶಗಳನ್ನ ನೋಡುವುದಾದರೆ, ಅಮೆರಿಕದಲ್ಲಿ ಈಗಾಗಲೇ ಸೇವೆಯಿಂದ ನಿವೃತ್ತಿಗೊಂಡಿದ್ದ ಮತ್ತು ಹಾರಾಟಕ್ಕೆ ಸಂಪೂರ್ಣ ಅಯೋಗ್ಯವಾಗಿದ್ದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ. ವಿಮಾನದ ಸುರಕ್ಷಿತ ಹಾರಾಟದ ಮಿತಿ 5,000 ಗಂಟೆಗಳಿದ್ದರೂ, ದಾಖಲೆಗಳನ್ನು ತಿದ್ದಿ ಸುಮಾರು 8,000 ಗಂಟೆ ಹಾರಾಟ ನಡೆಸಿದ್ದ ವಿಮಾನವನ್ನು ಅಜಿತ್ ಪವಾರ್ ಅವರ ಪ್ರಯಾಣಕ್ಕೆ ಬಳಸಲಾಗಿತ್ತು ಎಂಬುದು ತನಿಖೆಯಲ್ಲಿ ಹೊರಬರಬೇಕಿರುವ ಆಘಾತಕಾರಿ ಅಂಶ.
ಪೈಲಟ್ ಆಯ್ಕೆಯಲ್ಲೇ ಇತ್ತು ಸಂಚು ?
ವಿಮಾನದ ಪೈಲಟ್ ಸುಮಿತ್ ಕಪೂರ್ ಅವರ ಹಿನ್ನೆಲೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ವಿಮಾನ ಚಲಾಯಿಸಲು ಯತ್ನಿಸಿ ಅಮಾನತುಗೊಂಡಿದ್ದ ಇತಿಹಾಸ ಕಪೂರ್ ಅವರಿಗಿತ್ತು. ಇಂತಹ ವಿವಾದಿತ ವ್ಯಕ್ತಿಯನ್ನು ಉಪಮುಖ್ಯಮಂತ್ರಿಗಳಂತಹ ವಿವಿಐಪಿಗಳ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಯಾಕೆ ? ಅಷ್ಟೇ ಅಲ್ಲದೆ, ಮೊದಲು ನಿಗದಿಯಾಗಿದ್ದ ಪೈಲಟ್‌ಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಿ ಕಪೂರ್ ಮತ್ತು ತಂಡವನ್ನು ಕರೆತಂದಿದ್ದು ಉದ್ದೇಶಪೂರ್ವಕ ಸಂಚಿನ ಭಾಗವೇ ಎಂಬ ಅನುಮಾನ ವ್ಯಕ್ತವಾಗಿದೆ.
ಅಜಿತ್ ಪವಾರ್ ಅವರು ಅಂದು ರಸ್ತೆ ಮೂಲಕ ಪ್ರಯಾಣಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದನ್ನು ವಿಮಾನ ಪ್ರಯಾಣವನ್ನಾಗಿ ಬದಲಿಸಿದ್ದು ಯಾರು ಎಂಬುದು ದೊಡ್ಡ ಪ್ರಶ್ನೆ. ವಿಮಾನ ಪತನವಾಗುವ ಕೆಲವೇ ಕ್ಷಣಗಳ ಮೊದಲು ಕೋ-ಪೈಲಟ್ ಓ ಶಿಟ್ ಎಂದು ಕಿರುಚಿದ್ದರೂ, ಮುಖ್ಯ ಪೈಲಟ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ವಿಮಾನದೊಳಗಿನ ಸ್ಥಿತಿಯ ಬಗ್ಗೆ ಅನುಮಾನ ಮೂಡಿಸಿದೆ. ಪೈಲಟ್ ಉದ್ದೇಶಪೂರ್ವಕವಾಗಿ ಸುಮ್ಮನಿದ್ದರೇ ಅಥವಾ ಅಮಲಿನಲ್ಲಿದ್ದರೇ ಎಂಬುದು ವಿಧಿವಿಜ್ಞಾನ ವರದಿಯಿಂದ ತಿಳಿಯಬೇಕಿದೆ.
ಬಾರಾಮತಿಯಲ್ಲಿ ಅಂದು ದಟ್ಟ ಮಂಜು ಕವಿದಿತ್ತು. ಕನಿಷ್ಠ 5 ಕಿ.ಮೀ ವಿಸಿಬಿಲಿಟಿ ಇಲ್ಲದಿದ್ದರೂ, ಅಪಾಯಕಾರಿ ಟೇಬಲ್‌ಟಾಪ್ ರನ್‌ವೇನಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದು ಯಾರು ? ಡಿಜಿಸಿಎ (DGCA) ನಿಯಮಗಳನ್ನು ಗಾಳಿಗೆ ತೂರಿ ವಿಎಸ್ಆರ್ ವೆಂಚರ್ಸ್ ಕಾರ್ಯಾಚರಣೆ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ. ಈ ಹೈಪ್ರೊಫೈಲ್ ಕೇಸ್ ಈಗ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ರಾಜಕೀಯ ಮತ್ತು ಕಾನೂನು ಸಂಚಲನ ಮೂಡಿಸಿದೆ.
