ಅಜಿತ್ ಪವಾರ್ ಆಸ್ತಿಮೌಲ್ಯ ಎಷ್ಟು ಗೊತ್ತಾ? ಮನೆ, ಕಾರು, ಬಾಂಡ್, ಠೇವಣಿ ಇತ್ಯಾದಿ ಆಸ್ತಿ ವಿವರ ಇಲ್ಲಿದೆ

Untitled design 2026 01 28T135144.807

ಪುಣೆ, ಜನವರಿ 28: ಮಹಾರಾಷ್ಟ್ರ ರಾಜಕೀಯದಲ್ಲಿ ಅಪಾರ ಪ್ರಭಾವ ಹೊಂದಿದ್ದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಅವರು ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನಾಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಮೂರು ದಶಕಗಳ ರಾಜಕೀಯ ಪಯಣ ಹೊಂದಿದ್ದ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಮುಂಬೈನಿಂದ ಬಾರಾಮತಿಗೆ ಆಗಮಿಸುತ್ತಿದ್ದ ಚಾರ್ಟರ್ಡ್ ವಿಮಾನವು ತಾಂತ್ರಿಕ ದೋಷದಿಂದಾಗಿ ಬಾರಾಮತಿ ಏರ್‌ಪೋರ್ಟ್ ಸಮೀಪ ಅಪಘಾತಕ್ಕೊಳಗಾಗಿದೆ. ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಪೈಲಟ್ ಹಾಗೂ ಸಿಬ್ಬಂದಿ ಸೇರಿ ಒಟ್ಟು ಐವರು ಸಾವನ್ನಪ್ಪಿದ್ದಾರೆ.

ಅಜಿತ್ ಪವಾರ್ ಅವರು ಮಹಾರಾಷ್ಟ್ರ ರಾಜಕೀಯದ ಭೀಷ್ಮ ಎಂದೇ ಖ್ಯಾತರಾದ ಶರದ್ ಪವಾರ್ ಅವರ ಅಣ್ಣನ ಪುತ್ರ. 1982ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಚಳವಳಿಯ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು, 1991ರಲ್ಲಿ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆ ಬಳಿಕ ಸತತವಾಗಿ ಅದೇ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ, ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು. ಅವರು ಹಲವು ಬಾರಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಈ ಹುದ್ದೆಯಲ್ಲಿ ಅತಿಹೆಚ್ಚು ಅವಧಿ ಸೇವೆ ಸಲ್ಲಿಸಿದ ರಾಜಕಾರಣಿ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

ಅಜಿತ್ ಪವಾರ್ ಅವರು ಕಠಿಣ ಆಡಳಿತ ಶೈಲಿ, ಅಭಿವೃದ್ಧಿ ಪರ ಚಿಂತನೆ ಹಾಗೂ ನೇರ ಮಾತುಗಳಿಂದಲೇ ಪ್ರಸಿದ್ಧರಾಗಿದ್ದರು. ಬಾರಾಮತಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದರು. ನೀರಾವರಿ ಯೋಜನೆಗಳು, ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಘಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.

ರಾಜಕೀಯದ ಜೊತೆಗೆ ಅಜಿತ್ ಪವಾರ್ ಅವರ ಶ್ರೀಮಂತ ಜೀವನಶೈಲಿಯೂ ಸದಾ ಚರ್ಚೆಯ ವಿಷಯವಾಗಿತ್ತು. 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಅಜಿತ್ ಪವಾರ್ ಹಾಗೂ ಅವರ ಪತ್ನಿ ಸುನೇತ್ರಾ ಪವಾರ್ ಅವರ ಒಟ್ಟು ಆಸ್ತಿ ಮೌಲ್ಯ 124 ಕೋಟಿ ರೂ ಗೂ ಅಧಿಕವಾಗಿದೆ.

ಅಜಿತ್ ಪವಾರ್ ಅವರ ಹೆಸರಿನಲ್ಲಿ 8.22 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ 37.15 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಗಳಿವೆ. ಅವರ ಬಳಿ ಟೊಯೊಟಾ ಕ್ಯಾಮ್ರಿ ಮತ್ತು ಹೊಂಡಾ ಸಿಆರ್‌ವಿ ಕಾರುಗಳು, ಟ್ರಾಕ್ಟರ್, ಬೆಳ್ಳಿ ವಸ್ತುಗಳು, ಬ್ಯಾಂಕ್ ಠೇವಣಿಗಳು, ಷೇರು, ಬಾಂಡ್ ಹಾಗೂ ವಿಮಾ ಪಾಲಿಸಿಗಳು ಇವೆ. 14.12 ಲಕ್ಷ ರೂ ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 6.81 ಕೋಟಿ ರೂ ಹಣ, ಷೇರು ಮತ್ತು ಬಾಂಡ್‌ಗಳಲ್ಲಿ 55 ಲಕ್ಷ ರೂಕ್ಕೂ ಅಧಿಕ ಹೂಡಿಕೆ ಹಾಗೂ ಒಂದು ಕೋಟಿ ರೂ ಮೌಲ್ಯದ ಎಲ್‌ಐಸಿ ವಿಮಾ ಪಾಲಿಸಿಗಳು ಅವರ ಆಸ್ತಿಯಲ್ಲಿ ಸೇರಿವೆ.

ಪತ್ನಿ ಸುನೇತ್ರಾ ಪವಾರ್ ಅವರು ರಾಜ್ಯಸಭಾ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಹೆಸರಿನಲ್ಲಿ 14.57 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ 58.39 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಗಳಿವೆ. 44 ಲಕ್ಷ ರೂಗೂ ಅಧಿಕ ಮೌಲ್ಯದ ಎಲ್‌ಐಸಿ ಪಾಲಿಸಿಗಳು ಅವರ ಬಳಿ ಇದ್ದು, ದಂಪತಿಯ ಒಟ್ಟು ಘೋಷಿತ ಆಸ್ತಿ 124 ಕೋಟಿ ರೂ ಮೀರಿದೆ.

ಅಜಿತ್ ಪವಾರ್ ಅವರು ಪತ್ನಿ ಸುನೇತ್ರಾ ಹಾಗೂ ಪುತ್ರರಾದ ಪಾರ್ಥ್ ಪವಾರ್ ಮತ್ತು ಜಯ್ ಪವಾರ್ ಅವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

https://youtu.be/kICRfRQ03qU?si=zJlhdGrywxFZi2b2

Exit mobile version