ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಇಂದು ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಬಾರಾಮತಿಯಲ್ಲಿ ಚುನಾವಣೆ ಸಭೆಗಳಿಗೆ ತೆರಳುತ್ತಿದ್ದಾಗ ನಡೆದ ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಅವರ ಭದ್ರತಾ ಸಿಬ್ಬಂದಿ (PSO) ಮತ್ತು ಪೈಲಟ್ ಒಳಗೊಂಡಂತೆ ಐದೂ ಮಂದಿ ಸಾವನ್ನಪ್ಪಿದ್ದಾರೆ.
ವೈಯಕ್ತಿಕ ಜೀವನ
1959ರ ಜುಲೈ 22 ರಂದು ಅಹ್ಮದ್‌ನಗರದಲ್ಲಿ ಜನಿಸಿದ ಅಜಿತ್ ಪವಾರ್, ರಾಜಕೀಯವನ್ನು ರಕ್ತಗತವಾಗಿ ರೂಢಿಸಿಕೊಂಡಿದ್ದರು. ಚಿಕ್ಕಪ್ಪ ಶರದ್ ಪವಾರ್ ಅವರ ಗರಡಿಯಲ್ಲಿ ಬೆಳೆದ ಇವರು, ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಸಹಕಾರಿ ಸಂಸ್ಥೆಗಳ ಮೂಲಕ. ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮಾತ್ರ ಹೆಸರಾಗಿದ್ದ ಅವರು ಮುಂದೆ ಅವರ ರಾಜಕೀಯ ಸಾಮ್ರಾಜ್ಯ ಹೆಜ್ಜೆ ಇಡಲು ಸಹಕಾರಿಯಾಯಿತು.
ಆಡಳಿತದ ದಕ್ಷತೆ
ಬಾರಾಮತಿ ಕ್ಷೇತ್ರ ಎಂದರೆ ಅಜಿತ್ ಪವಾರ್, ಅಜಿತ್ ಪವಾರ್ ಎಂದರೆ ಬಾರಾಮತಿ ಎನ್ನುವ ಮಟ್ಟಕ್ಕೆ ಅವರು ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹಣಕಾಸು, ನೀರಾವರಿ ಮತ್ತು ಯೋಜನಾ ಇಲಾಖೆಗಳಲ್ಲಿ ಅವರ ಹಿಡಿತ ಅಪಾರವಾಗಿತ್ತು. ಬಜೆಟ್ ಅಂಕಿಅಂಶಗಳನ್ನು ಬೆರಳ ತುದಿಯಲ್ಲಿ ಇಟ್ಟುಕೊಳ್ಳುತ್ತಿದ್ದ ಅವರು, ಅಧಿಕಾರಿಗಳ ವಲಯದಲ್ಲಿ ದಕ್ಷ ಆಡಳಿತಗಾರ ಎಂದು ಹೆಸರು ಮಾಡಿದ್ದರು. ಮಹಾರಾಷ್ಟ್ರದ ಇತಿಹಾಸದಲ್ಲಿ ಸುದೀರ್ಘ ಕಾಲ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ದಾಖಲೆಯೂ ಅವರ ಹೆಸರಲ್ಲಿದೆ.
ಅಜಿತ್ ಪವಾರ್ ಅವರ ರಾಜಕೀಯ ಜೀವನವು ಅನೇಕ ತಿರುವುಗಳಿಂದ ಕೂಡಿದೆ. 2019ರಲ್ಲಿ ಬೆಳ್ಳಂಬೆಳಗ್ಗೆ ದೇವೇದ್ರ ಫಡ್ನವೀಸ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾಗಲಿ ಅಥವಾ 2023ರಲ್ಲಿ ಶರದ್ ಪವಾರ್ ಅವರಿಗೆ ಎದುರಾಗಿ ನಿಂತು ಎನ್‌ಡಿಎ ಸರ್ಕಾರ ಸೇರಿದ್ದಾಗಲಿ, ಪ್ರತಿಯೊಂದು ನಡೆಯೂ ರಾಜ್ಯದ ರಾಜಕೀಯ ಸಮೀಕರಣವನ್ನೇ ಬದಲಿಸಿತ್ತು. ವಯಸ್ಸಾದ ಚಿಕ್ಕಪ್ಪ ಪಕ್ಷ ಮುನ್ನಡೆಸುವುದು ಸರಿಯಲ್ಲ ಎಂದು ಧ್ವನಿ ಎತ್ತಿ ಸ್ವತಂತ್ರ ಹಾದಿ ಹಿಡಿದಿದ್ದ ಅವರು, ಮಹಾರಾಷ್ಟ್ರದ ಅತಿದೊಡ್ಡ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದರು.
ನೀರಾವರಿ ಹಗರಣ ಸೇರಿದಂತೆ ಹಲವು ವಿವಾದಗಳು ಅವರ ಬೆನ್ನಿಗೆ ಅಂಟಿಕೊಂಡಿದ್ದರೂ, ತಳಮಟ್ಟದ ಕಾರ್ಯಕರ್ತರ ಜೊತೆಗಿನ ಸಂಪರ್ಕ ಮಾತ್ರ ಎಂದೂ ಕಳಚಿರಲಿಲ್ಲ. ಅವರ ವೇಗದ ಕಾರ್ಯ ಶೈಲಿ ಮತ್ತು ನೇರ ಮಾತುಗಾರಿಕೆ ಅವರಿಗೆ ಲಕ್ಷಾಂತರ ಅಭಿಮಾನಿಗಳನ್ನು ತಂದುಕೊಟ್ಟಿತ್ತು. ಸಾಯುವ ಕ್ಷಣದವರೆಗೂ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಸಕ್ರಿಯರಾಗಿದ್ದರು.
ಅಜಿತ್ ಪವಾರ್ ಅವರ ನಿಧನವು ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಇಬ್ಬರು ಮಕ್ಕಳನ್ನು ಮಾತ್ರವಲ್ಲದೆ, ಇಡೀ ಮಹಾರಾಷ್ಟ್ರದ ರಾಜಕೀಯ ಶಕ್ತಿಯನ್ನು ಅನಾಥವಾಗಿಸಿದೆ. ಅವರ ಅನುಪಸ್ಥಿತಿಯು ರಾಜ್ಯದ ಮುಂಬರುವ ರಾಜಕೀಯ ಲೆಕ್ಕಾಚಾರಗಳನ್ನು ಮತ್ತು ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಖಂಡಿತವಾಗಿಯೂ ಬದಲಿಸಲಿದೆ.
