ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಈ ಅಪಘಾತಕ್ಕೀಡಾದ ಲಿಯರ್‌ಜೆಟ್ 45 ಖಾಸಗಿ ವಿಮಾನವು ಈಗಾಗಲೇ 2023ರ ಸೆಪ್ಟೆಂಬರ್ ತಿಂಗಳಲ್ಲಿ ಭೀಕರ ಅಪಘಾತಕ್ಕೀಡಾಗಿತ್ತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ವಿಮಾನ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿ ಪತನಗೊಂಡಿದೆ. ಅಪಘಾತದ ತಕ್ಷಣವೇ ವಿಮಾನಕ್ಕೆ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ವಿಮಾನ ಸಂಪೂರ್ಣವಾಗಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಭೀಕರ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಪೈಲಟ್ ಹಾಗೂ ಇನ್ನಿಬ್ಬರು ಸಿಬ್ಬಂದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತಕ್ಕೀಡಾದ ಈ ಲಿಯರ್‌ಜೆಟ್ 45 ವಿಮಾನವನ್ನು ವಿಎಸ್ಆರ್ ವೆಂಚರ್ಸ್ ಸಂಸ್ಥೆ ನಿರ್ವಹಿಸುತ್ತಿತ್ತು. ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ದೋಷಗಳು ಈ ಅಪಘಾತಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕ ವರದಿಗಳು ಸೂಚಿಸುತ್ತಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ತಾಂತ್ರಿಕ ತಜ್ಞರು ಧಾವಿಸಿದ್ದು, ಶೋಧ ಮತ್ತು ತನಿಖಾ ಕಾರ್ಯಾಚರಣೆ ಮುಂದುವರಿದಿದೆ.
2023ರ ಸೆಪ್ಟೆಂಬರ್‌ನಲ್ಲಿ ನಡೆದಿತ್ತು ಭೀಕರ ಅಪಘಾತ
ಇದೇ ವಿಮಾನವು 2023ರ ಸೆಪ್ಟೆಂಬರ್ 14ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿತ್ತು. ವಿಶಾಖಪಟ್ಟಣಂನಿಂದ ಮುಂಬೈಗೆ ತೆರಳುತ್ತಿದ್ದ ಈ ಖಾಸಗಿ ವಿಮಾನವು ಭಾರೀ ಮಳೆಯ ನಡುವೆಯೇ ಲ್ಯಾಂಡ್ ಆಗಲು ಪ್ರಯತ್ನಿಸಿದ ವೇಳೆ ರನ್‌ವೇಯಿಂದ ಜಾರಿ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
ನಾಗರಿಕ ವಿಮಾನಯಾನ ಸಚಿವಾಲಯದ ವರದಿ ಪ್ರಕಾರ, ವಿಮಾನವು ವಿಶಾಖಪಟ್ಟಣಂನಿಂದ ಯಾವುದೇ ತೊಂದರೆ ಇಲ್ಲದೆ ಹೊರಟಿತ್ತು. ಆದರೆ ಮುಂಬೈಗೆ ತಲುಪುವ ವೇಳೆಗೆ ಭಾರೀ ಮಳೆ ಹಾಗೂ ಕಡಿಮೆ ಗೋಚರತೆ ಸಮಸ್ಯೆ ಎದುರಾದ ಕಾರಣ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿತ್ತು. ರನ್‌ವೇ 27ರಲ್ಲಿ ಇಳಿಯಲು ಅನುಮತಿ ನೀಡಲಾಗಿದ್ದು, ಗಾಳಿಯ ವೇಗ ಮತ್ತು ದಿಕ್ಕು ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಕಠಿಣಗೊಳಿಸಿತ್ತು ಎಂದು ವರದಿ ತಿಳಿಸಿದೆ.
ಆ ವೇಳೆ ವಿಮಾನದಲ್ಲಿ ಆರು ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್‌ಗಳು ಇದ್ದರು. ಭಾರೀ ಅಪಾಯದಿಂದ ಪಾರಾದರೂ, ವಿಮಾನಕ್ಕೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿತ್ತು. ಈ ಘಟನೆಯ ನಂತರ ವಿಮಾನದ ತಾಂತ್ರಿಕ ತಪಾಸಣೆ ನಡೆಸಲಾಗಿದರೂ, ಇದೀಗ ಮತ್ತೆ ಅದೇ ವಿಮಾನವು ಭೀಕರ ದುರಂತಕ್ಕೆ ಕಾರಣವಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.
ಒಂದೇ ವಿಮಾನವು ಎರಡು ಬಾರಿ ಅಪಘಾತಕ್ಕೀಡಾಗಿರುವುದು ನಾಗರಿಕ ವಿಮಾನಯಾನ ಸುರಕ್ಷತಾ ಮಾನದಂಡಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎದ್ದಿದೆ. ವಿಮಾನದ ನಿರ್ವಹಣೆ, ತಾಂತ್ರಿಕ ತಪಾಸಣೆ ಮತ್ತು ಹಾರಾಟಕ್ಕೆ ನೀಡಲಾಗುವ ಅನುಮತಿಗಳ ಕುರಿತು ಸಮಗ್ರ ತನಿಖೆ ಅಗತ್ಯವಿದೆ ಎಂದು ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಸಾವಿರಾರು ಬೆಂಬಲಿಗರು ಬಾರಾಮತಿಯಲ್ಲಿ ಜಮಾಯಿಸುತ್ತಿದ್ದಾರೆ.
