ನವದೆಹಲಿ: ಇತ್ತೀಚೆಗೆ ವಿಮಾನ ಪ್ರಯಾಣಗಳು ಅಪಾಯಕಾರಿ ಎನ್ನುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಇದೇ ಸರಣಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಹಾಂಗ್ ಕಾಂಗ್‌ನಿಂದ ದೆಹಲಿಗೆ ಬಂದಿಳಿದ ಏರ್ ಇಂಡಿಯಾದ (Air India) AI315 ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI Airport) ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಆದರೆ, ಕೆಲವೇ ನಿಮಿಷಗಳ ನಂತರ ವಿಮಾನದ ಸಹಾಯಕ ವಿದ್ಯುತ್ ಘಟಕ (APU – Auxiliary Power Unit) ನಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಪ್ರಯಾಣಿಕರು ವಿಮಾನದಿಂದ ಇಳಿಯಲು ಪ್ರಾರಂಭಿಸಿದ್ದರು. ಆದರೆ, ಅದೃಷ್ಟವಶಾತ್ APU ಸ್ವಯಂಚಾಲಿತವಾಗಿ ಸ್ಥಗಿತಗೊಂಡು ದೊಡ್ಡ ಅಪಘಾತ ತಪ್ಪಿತ್ತು.
ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗಳು ಗಾಯಗೊಂಡಿಲ್ಲ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿಸಲಾಗಿದೆ. ಪ್ರಸ್ತುತ ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, AI315 ವಿಮಾನದ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಇತ್ತೀಚೆಗೆ ಗುಜರಾತ್ ಅಹಮದಾಬಾದ್‌ನಲ್ಲಿ (Ahmedabad) ನಡೆದ ಏರ್ ಇಂಡಿಯಾ ವಿಮಾನದ ಅಪಘಾತದ ನಂತರ ಮತ್ತೆ ಈ ರೀತಿಯ ಘಟನೆ ಸಂಭವಿಸಿದ್ದು, ವಿಮಾನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಕೇಂದ್ರ ವಿಮಾನಯಾನ ಇಲಾಖೆಯು (DGCA) ಹಲವಾರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದರೂ, ಈ ರೀತಿಯ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ಆತಂಕಕ್ಕೀಡುಮಾಡಿದೆ.
ಸಹಾಯಕ ವಿದ್ಯುತ್ ಘಟಕ (APU) ಎಂಬುದು ವಿಮಾನದ ಒಂದು ಸಣ್ಣ ಎಂಜಿನ್ ಆಗಿದ್ದು, ಇದು ವಿಮಾನ ನಿಲ್ದಾಣದಲ್ಲಿ ನಿಲ್ಲುವಾಗ ವಿದ್ಯುತ್ ಮತ್ತು ವಾಯು ಒತ್ತಡವನ್ನು ಒದಗಿಸುತ್ತದೆ. ಇದು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿರುತ್ತದೆ. APU ನಿಂದ ಬೆಂಕಿ ಹೊರಡುವುದು ಅಪರೂಪದ ಘಟನೆಯಾದರೂ, ತಾಂತ್ರಿಕ ದೋಷ ಅಥವಾ ನಿರ್ವಹಣೆಯ ಕೊರತೆಯಿಂದ ಇದು ಸಂಭವಿಸಬಹುದು.