ನವದೆಹಲಿ: ಟೆಕ್ನಾಲಜಿ ಜಗತ್ತು ಕೃತಕ ಬುದ್ಧಿಮತ್ತೆ (ಎಐ)ಯ ತರಂಗದಲ್ಲಿ ಮುಳುಗುತ್ತಿದ್ದಂತೆ, ಪ್ರಮುಖ ಕಂಪನಿಗಳು ತಮ್ಮ ಉದ್ಯೋಗವನ್ನು ಪುನರ್ ರಚಿಸುತ್ತಿವೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಮೈಕ್ರೋಸಾಫ್ಟ್ ಮತ್ತು ಇನ್ಫೋಸಿಸ್‌ನಂತಹ ದೈತ್ಯ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಈ ಲೇಔಟ್‌ಗಳ ಹಿಂದಿನ ಮುಖ್ಯ ಕಾರಣವೆಂದರೆ ಎಐಯ ಪ್ರಭಾವ. ಇದೀಗ ಈ ಸಾಲಿಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಕೂಡ ಸೇರಿಕೊಂಡಿದೆ. ಸಂಸ್ಥೆಯ ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ಶೇ.15ರಷ್ಟು ಕಡಿತ ಮಾಡಲು ಅಮೆಜಾನ್ ಸಜ್ಜಾಗಿದೆ.
ಅಮೆಜಾನ್‌ನ ಈ ನಿರ್ಧಾರವು ಎಐ ಮತ್ತು ಕ್ಲೌಡ್ ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯಿಂದಾಗಿ ಬಂದಿದೆ. ಸಂಸ್ಥೆಯ ಆಂತರಿಕ ವಿಭಾಗವಾದ ಪೀಪಲ್ ಎಕ್ಸ್‌ಪೀರಿಯೆನ್ಸ್ ಅಂಡ್ ಟೆಕ್ನಾಲಜಿ (PXT) ಟೀಮ್ ಜಾಗತಿಕವಾಗಿ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ನೇಮಕಾತಿ, ತರಬೇತಿ, ತಾಂತ್ರಿಕ ಬೆಂಬಲ ಮತ್ತು ಇತರ HR ಸಂಬಂಧಿತ ಕೆಲಸಗಳು ಸೇರಿವೆ.
ವರದಿಗಳ ಪ್ರಕಾರ, ಈ ತಂಡದ ಶೇ.15ರಷ್ಟು ಅಂದರೆ ಸುಮಾರು 1,500 ಉದ್ಯೋಗಿಗಳು ವಜಾಗೊಳ್ಳುವ ಸಾಧ್ಯತೆಯಿದೆ. ಆದರೆ ಅಮೆಜಾನ್ ಇನ್ನೂ ನಿಖರ ಸಂಖ್ಯೆ ಅಥವಾ ಸಮಯವನ್ನು ಅಧಿಕೃತವಾಗಿ ಘೋಷಿಸಿಲ್ಲ. ಈ ಕಡಿತವು ಸಂಸ್ಥೆಯ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಬಂದಿದ್ದು, ಎಐಯನ್ನು ಹೆಚ್ಚು ಅಳವಡಿಸಿಕೊಳ್ಳುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಎಐಯ ಪ್ರಭಾವವು HR ವಿಭಾಗದಲ್ಲಿ ಬದಲಾವಣೆಗಳೇನು?
ನೇಮಕಾತಿ ಪ್ರಕ್ರಿಯೆಯಲ್ಲಿ ರೆಸ್ಯೂಮ್‌ಗಳನ್ನು ಪರಿಶೀಲಿಸುವುದು, ಸಂದರ್ಶನಗಳನ್ನು ನಿರ್ವಹಿಸುವುದು ಮತ್ತು ಉದ್ಯೋಗಿ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಮಾನವರ ಕೆಲಸವಾಗಿತ್ತು. ಆದರೆ ಎಐ ಟೂಲ್‌ಗಳು ಇದನ್ನು ಸ್ವಯಂಚಾಲಿತಗೊಳಿಸುತ್ತಿವೆ. ಅಮೆಜಾನ್‌ನಂತಹ ಕಂಪನಿಗಳು ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ಖರ್ಚುಗಳನ್ನು ಕಡಿಮೆ ಮಾಡುತ್ತಿವೆ. ಕ್ಲೌಡ್ ಕಂಪ್ಯೂಟಿಂಗ್‌ನ ಬಳಕೆಯು ಡೇಟಾ ನಿರ್ವಹಣೆಯನ್ನು ಸರಳಗೊಳಿಸುತ್ತದೆ.
ಈ ವರ್ಷದ ಆರಂಭದಲ್ಲಿ ಅಮೆಜಾನ್ ಈಗಾಗಲೇ ಹಲವು ವಿಭಾಗಗಳಲ್ಲಿ ಲೇಔಟ್‌ಗಳನ್ನು ಮಾಡಿದೆ. ಗ್ರಾಹಕ ಸಾಧನಗಳ ಘಟಕ, ವಂಡರಿ ಪಾಡ್‌ಕ್ಯಾಸ್ಟ್ ವಿಭಾಗ ಮತ್ತು ಅಮೆಜಾನ್ ವೆಬ್ ಸರ್ವೀಸಸ್ (AWS)ನಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಾಯಿತು. ಇದೀಗ HR ವಿಭಾಗದ ಮೇಲೆ ಗುರಿ ಇರಿಸಿರುವುದು ಸಂಸ್ಥೆಯ ದೀರ್ಘಕಾಲೀನ ಯೋಜನೆಯ ಭಾಗವಾಗಿದೆ. 2025ರಲ್ಲಿ ಎಐ ಮತ್ತು ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಮೇಲೆ 100 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲು ಅಮೆಜಾನ್ ನಿರ್ಧರಿಸಿದೆ.