ವೇದಿಕೆಯಲ್ಲೇ ಹಠಾತ್ ಕುಸಿದು ಬಿದ್ದು ಕೊನೆಯುಸಿರೆಳೆದ 24ರ ಹರೆಯದ ಟೆಕ್ಕಿ

Web (77)

ಗುಜರಾತ್‌ನ ಸೂರತ್‌ನಲ್ಲಿ ನಡೆದ ವರ್ಡ್‌ಕ್ಯಾಂಪ್ ಸೂರತ್ 2025 ಕಾರ್ಯಕ್ರಮದ ವೇದಿಕೆಯಲ್ಲೇ 24 ವರ್ಷದ ಯುವ ವೆಬ್ ಡೆವಲಪರ್ ಝಿಲ್ ಥಕ್ಕರ್ ಭಾಷಣ ಮುಗಿಸಿ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಮೃತಪಟ್ಟ ದುಃಖದ ಘಟನೆ ನಡೆದಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಮೂಲತಃ ರಾಯ್‌ಪುರದವರಾದ ಝಿಲ್ ಥಕ್ಕರ್ ಅಹಮದಾಬಾದ್‌ನ ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ 4 ಗಂಟೆಗೆ ಸೂರತ್‌ಗೆ ಆಗಮಿಸಿದ್ದ ಅವರು ಸಂಜೆ 5 ಗಂಟೆ ಸುಮಾರಿಗೆ ಕಪೋದ್ರಾದ ಶ್ರೀ ಸ್ವಾಮಿ ಆತ್ಮಾನಂದ ಸರಸ್ವತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಕಂಪನಿಯನ್ನು ಪ್ರತಿನಿಧಿಸಿ ಭಾಷಣ ಮಾಡುತ್ತಿದ್ದರು.

ಭಾಷಣ ಮುಗಿದ ಕೂಡಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಸುತ್ತಲಿದ್ದವರು ತಕ್ಷಣ ಓಡಿಬಂದು ಸಹಾಯ ಮಾಡಿದರೂ, ಆಸ್ಪತ್ರೆಗೆ ಕೊಂಡೊಯ್ಯುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಪ್ರಾಥಮಿಕ ತನಿಖೆಯಲ್ಲಿ ಹಠಾತ್ ಹೃದಯಾಘಾತ ಕಾರಣ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಕಪೋದ್ರಾ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಬಿ. ಔಸುರ ತಿಳಿಸಿದ್ದಾರೆ.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಯುವಕ-ಯುವತಿಯರಲ್ಲಿ ಹಠಾತ್ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. ಒತ್ತಡ, ಅನಿಯಮಿತ ಆಹಾರ, ನಿದ್ರೆ ಕೊರತೆ, ಜಂಕ್ ಫುಡ್, ಜಿಮ್‌ನಲ್ಲಿ ಅತಿಯಾದ ವ್ಯಾಯಾಮ. ಇದೆಲ್ಲವೂ ಯುವ ಭಾರತದ ಹೃದಯಕ್ಕೆ ದೊಡ್ಡ ಶತ್ರುಗಳಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ.

Exit mobile version