ಖಾರ್ಗೋನ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ಕನಿಷ್ಠ 200 ಗಿಳಿಗಳು ಆಹಾರ ವಿಷದಿಂದ ಸಾವನ್ನಪ್ಪಿದ ದುರಂತ ಸಂಭವಿಸಿದೆ. ಇದಕ್ಕೆ ಆಹಾರ ವಿಷ ಅಥವಾ ಉದ್ದೇಶಿತ ವಿಷಪ್ರಾಶನವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಖಾರ್ಗೋನ್ ಜಿಲ್ಲೆಯ ಬದ್ಧಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಜಲಚರ ಸೇತುವೆಯ ಸುತ್ತಮುತ್ತ ಗಿಳಿಗಳ ಮೃತದೇಹಗಳು ಪತ್ತೆಯಾಗಿವೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಅರಣ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಆರಂಭಿಸಿದರು.
ಈ ಘಟನೆಗೆ ಬಗ್ಗೆ ಆರಂಭದಲ್ಲಿ ಹಕ್ಕಿ ಜ್ವರದ ಭಯ ಉಂಟಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಹಾಗೂ ಪಶುವೈದ್ಯಕೀಯ ತಪಾಸಣೆಯಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಸಾವಿಗೆ ಆಹಾರ ವಿಷವೇ ಪ್ರಮುಖ ಕಾರಣ ಎಂಬುದು ದೃಢವಾಗಿದೆ.
ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ಅವರು ಮಾತನಾಡಿ, “ರಕ್ಷಣಾ ಕಾರ್ಯಾಚರಣೆಯ ವೇಳೆ ಕೆಲ ಗಿಳಿಗಳು ಜೀವಂತವಾಗಿದ್ದವು. ಆದರೆ ವಿಷದ ಪರಿಣಾಮ ತುಂಬಾ ತೀವ್ರವಾಗಿದ್ದರಿಂದ ಅವು ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿವೆ. ಇದು ಸಹಜ ಸಾವು ಅಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಕೀಯ ಅಧಿಕಾರಿ ಡಾ. ಮನೀಷಾ ಚೌಹಾಣ್ ಅವರು, “ಗಿಳಿಗಳಲ್ಲಿ ಆಹಾರ ವಿಷದ ಸ್ಪಷ್ಟ ಲಕ್ಷಣಗಳು ಕಂಡುಬಂದಿವೆ. ಹಕ್ಕಿ ಜ್ವರ ಅಥವಾ ಯಾವುದೇ ವೈರಲ್ ಸೋಂಕಿನ ಗುರುತುಗಳಿಲ್ಲ” ಎಂದು ಹೇಳಿದ್ದಾರೆ. ಹೆಚ್ಚಿನ ದೃಢೀಕರಣಕ್ಕಾಗಿ ಪಕ್ಷಿಗಳ ಅಂಗಾಂಗಗಳ ಮಾದರಿಗಳನ್ನು ಜಬಲ್ಪುರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಘಟನೆಯ ಬಳಿಕ ಅರಣ್ಯ ಇಲಾಖೆ ಜಲಚರ ಸೇತುವೆ ಬಳಿ ಪಕ್ಷಿಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೆ, ನಿಯಮ ಉಲ್ಲಂಘನೆ ತಡೆಯಲು ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
