ಲಖನೌ, (ಉತ್ತರ ಪ್ರದೇಶ): ಮದುವೆ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಹಾಕಿದ್ದರಿಂದ ಫಾರಂನಲ್ಲಿದ್ದ 140 ಕೋಳಿಗಳು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ನಡೆದಿದೆ. ಕೋಳಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋಳಿ ಫಾರಂ ಮಾಲೀಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಘಟನೆ ಎಲ್ಲಿ ನಡೆಯಿತು?
ಸುಲ್ತಾನಪುರ ಜಿಲ್ಲೆಯ ಕುದ್ವಾರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ರಾಮ್ ಭದ್ರ ಪೂರ್ವದಿಂದ ಬಂದ ಬಬ್ಬನ್ ವಿಶ್ವಕರ್ಮ ಎಂಬುವವರ ಮಗಳ ವಿವಾಹದ ಮೆರವಣಿಗೆಯು ಸಬೀರ್ ಅಲಿ ಅವರ ಕೋಳಿ ಸಾಕಣೆ ಕೇಂದ್ರದ ಮೂಲಕ ಸಾಗಿತ್ತು. ಮದುವೆಯ ಸಂಭ್ರಮದಲ್ಲಿ ಡಿಜೆ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.
140 ಕೋಳಿಗಳ ಹೇಗೆ ಸತ್ತವು?
ರಾತ್ರಿ ಸುಮಾರು 9:30 ರ ವೇಳೆಗೆ ಡಿಜೆಯಲ್ಲಿ ಅತ್ಯಂತ ಹೆಚ್ಚಿನ ಡಿಜೆ ಸಂಗೀತವನ್ನು ನುಡಿಸಲಾಗುತ್ತಿತ್ತು. ಈ ಶಬ್ದವು ಫಾರಂನಲ್ಲಿದ್ದ ಕೋಳಿಗಳಲ್ಲಿ ತೀವ್ರವಾದ ಭೀತಿಯನ್ನು ಉಂಟುಮಾಡಿತ್ತು. ಹೆಚ್ಚಿನ ಡೆಸಿಬಲ್ ಶಬ್ದ ತರಂಗಗಳನ್ನು ತಡೆದುಕೊಳ್ಳಲಾರದೆ ಬಡಕೋಳಿಗಳು ದಿಕ್ಕಾಪಾಲಾಗಿ ಓಡಾಡತೊಡಗಿದವು. ಕೆಲವು ಕೋಳಿಗಳು ಸ್ಥಳದಲ್ಲಿಯೇ ಕುಸಿದು ಬಿದ್ದವು. ಘಟನೆಯ ಬಳಿಕ ಮಾಡಿದ ಪರಿಶೀಲನೆಯಲ್ಲಿ ಒಟ್ಟು 140 ಕೋಳಿಗಳು ಮೃತಪಟ್ಟಿರುವುದು ದೃಢಪಟ್ಟಿತು.
ಫಾರಂ ಮಾಲೀಕರ ದೂರು
ಕೋಳಿ ಫಾರಂ ಮಾಲೀಕ ಸಬೀರ್ ಅಲಿ ಅವರು ತಮ್ಮ ಜೀವನೋಪಾಯವೇ ಕೋಳಿ ಸಾಕಾಣಿಕೆಯಾಗಿದೆ. ಇಷ್ಟೊಂದು ಕೋಳಿಗಳು ಒಮ್ಮೆಲೇ ಸತ್ತಿದ್ದರಿಂದ ಅವರಿಗೆ ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಈ ಹಿನ್ನೆಲೆ ಅವರು ಸ್ಥಳೀಯ ಪೋಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತೀವ್ರವಾದ ಶಬ್ದವೇ ಕೋಳಿಗಳ ಸಾವಿಗೆ ಕಾರಣ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. “ಸಾಮಾನ್ಯ ಶಬ್ದಕ್ಕೆ ಕೋಳಿಗಳು ಸಾಯುವುದಿಲ್ಲ, ಆದರೆ ಆ ರಾತ್ರಿ ಡಿಜೆಯ ಶಬ್ದ ದೊಡ್ಡ ಮಟ್ಟದಲ್ಲಿತ್ತು. ನನ್ನ ಕೋಳಿಗಳು ಭಯಭೀತಗೊಂಡು ಹೃದಯಾಘಾತದಿಂದ ಸತ್ತಿವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಕ್ರಮ
ದೂರಿನ ಮೇರೆಗೆ ಸುಲ್ತಾನಪುರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾರ್ಸಿಪುರದ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಸಾರ್ವಜನಿಕ ಶಾಂತಿಗೆ ಭಂಗ, ರಾಷ್ಟ್ರೀಯ ಪರಿಸರ ನ್ಯಾಯಾಲತದ ನಿಯಮಗಳ ಉಲ್ಲಂಘನೆ ಮತ್ತು ನಿರ್ಲಕ್ಷ್ಯದಿಂದ ಆಸ್ತಿ ನಷ್ಟಕ್ಕೆ ಕಾರಣವಾದ ಆರೋಪಗಳಡಿ ಪ್ರಕರಣ ದಾಖಲಾಗಿದೆ.
ಮದುವೆಯಲ್ಲಿ ಬಳಸಿದ ಡಿಜೆ ವ್ಯವಸ್ಥೆಯು ಅನುಮತಿಸಲಾದ ಶಬ್ದ ಮಿತಿಗಳನ್ನು (ಡೆಸಿಬಲ್ ಮಿತಿಯನ್ನು) ಮೀರಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
