ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಯುವಕನನ್ನು ಮಹಿಳೆಯ ಕುಟುಂಬಸ್ಥರು ಥಳಿಸಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದೆ. ಮೃತನನ್ನು ನರಸಿಂಹರಾಜು (32) ಎಂದು ಗುರುತಿಸಲಾಗಿದೆ.
ನರಸಿಂಹರಾಜು ಮತ್ತು ವಿವಾಹಿತೆಯ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಶಂಕಿಸಲಾಗಿದೆ. ಆ ಮಹಿಳೆ ಆಗಾಗ ನರಸಿಂಹರಾಜು ಮನೆಗೆ ಬರುತ್ತಿದ್ದಳು. ಈ ವಿಷಯವನ್ನು ಮಹಿಳೆಯ ಮನೆಯವರು ಹಲವು ಬಾರಿ ಗಮನಿಸಿದ್ದರು. ಶನಿವಾರವೂ ಆ ಮಹಿಳೆ ನರಸಿಂಹರಾಜು ಮನೆಯಲ್ಲಿ ಇದ್ದರು. ಈ ಮಾಹಿತಿಯನ್ನು ಕುಟುಂಬಸ್ಥರಿಗೆ ತಿಳಿದ ಕೂಡಲೇ, ಅವರು ಮುತ್ಯಾಲಮ್ಮ ನಗರದಲ್ಲಿರುವ ನರಸಿಂಹರಾಜು ನಿವಾಸಕ್ಕೆ ಆಗಮಿಸಿದ್ದಾರೆ.
ನಂತರ ನರಸಿಂಹರಾಜುವನ್ನು ಬಲವಂತವಾಗಿ ಮನೆಯಿಂದ ಹೊರಕ್ಕೆ ಎಳೆದು ರಸ್ತೆಗೆ ತಂದಿದ್ದಾರೆ. ಆ ಬಳಿಕ ನಾಲ್ವರು–ಐವರು ಸೇರಿಕೊಂಡು ಯುವಕನ ಮೇಲೆ ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ನಡೆಸುವಾಗ ಲಾಠಿ, ಕಲ್ಲು ಸೇರಿದಂತೆ ಕೈಗೆ ಸಿಕ್ಕದ್ದನ್ನೇಲ್ಲಾ ಬಳಸಿಕೊಂಡು ನರಸಿಂಹರಾಜುವನ್ನು ಬರ್ಬರವಾಗಿ ಥಳಿಸಲಾಗಿದೆ.
ಹಲ್ಲೆಯ ನಂತರ ಗಂಭೀರವಾಗಿ ಗಾಯಗೊಂಡ ನರಸಿಂಹರಾಜುವನ್ನು ಸ್ಥಳೀಯರು ತಕ್ಷಣ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿದ್ದರೂ, ಅತಿಯಾದ ರಕ್ತಸ್ರಾವ ಮತ್ತು ತಲೆಗೆ ಬಿದ್ದ ಭಾರೀ ಹೊಡೆತದಿಂದ ಯುವಕ ಮೃತಪಟ್ಟಿದ್ದಾನೆ. ಈ ಕುರಿತಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ತಾಯಿ ಸ್ವತಃ ದೂರು ನೀಡಿದ್ದಾರೆ.
