ಬೆಂಗಳೂರು: ಪ್ರತಿಕ್ಷಣದ ಸುದ್ದಿಗಳು, ರಾಜಕೀಯ ಚರ್ಚೆಗಳು ಹಾಗೂ ಜಾಗತಿಕ ವಿದ್ಯಮಾನಗಳ ವೇದಿಕೆಯಾಗಿರುವ ‘X’ (ಹಿಂದಿನ ಟ್ವಿಟರ್), ಇಂದು (ಫೆ.16, ಸೋಮವಾರ) ಸಂಜೆ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತ್ತು. ಸಂಜೆ 7 ಗಂಟೆಯ ಸುಮಾರಿಗೆ ಭಾರತದಾದ್ಯಂತ ಸಾವಿರಾರು ಬಳಕೆದಾರರು ಈ ಸಮಸ್ಯೆಯನ್ನು ವರದಿ ಮಾಡಿದ್ದು, ಡಿಜಿಟಲ್ ಲೋಕದಲ್ಲಿ ಭಾರೀ ಸಂಚಲನ ಮೂಡಿಸಿದೆ.
ನಡೆದಿದ್ದೇನು ?
ಸಂಜೆ ಸುಮಾರು 7:00 ಗಂಟೆಯ ಹೊತ್ತಿಗೆ ಬಳಕೆದಾರರು ತಮ್ಮ ಅಪ್ಲಿಕೇಶನ್ ತೆರೆದಾಗ ಹೊಸ ಫೀಡ್‌ಗಳು ಲೋಡ್ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬಂದವು. ಜಾಲತಾಣಗಳ ಏರಿಳಿತಗಳನ್ನು ಗಮನಿಸುವ ‘ಡೌನ್ ಡಿಟೆಕ್ಟರ್’ (Down Detector) ನೀಡಿರುವ ಅಂಕಿಅಂಶಗಳ ಪ್ರಕಾರ, ಸಂಜೆ 7:02ರ ಹೊತ್ತಿಗೆ ದೂರುಗಳ ಸಂಖ್ಯೆ 3,000 ದಾಟಿತ್ತು. ಇದು ಕೇವಲ ಅಧಿಕೃತವಾಗಿ ದೂರು ನೀಡಿದವರ ಸಂಖ್ಯೆಯಾಗಿದ್ದು, ಸಮಸ್ಯೆ ಎದುರಿಸಿದವರ ವಾಸ್ತವ ಸಂಖ್ಯೆ ಲಕ್ಷಾಂತರ ಇರಬಹುದು ಎಂದು ಅಂದಾಜಿಸಲಾಗಿದೆ.
ಖಾಲಿ ಪರದೆ, ಹಳೆಯ ಫೀಡ್‌ಗಳ ದರ್ಶನ
ಈ ತಾಂತ್ರಿಕ ದೋಷವು ಕೇವಲ ಮೊಬೈಲ್ ಅಪ್ಲಿಕೇಶನ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಡೆಸ್ಕ್‌ಟಾಪ್ (Web) ಆವೃತ್ತಿಯಲ್ಲೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಬಳಕೆದಾರರು X.com ಎಂದು ಟೈಪ್ ಮಾಡಿದಾಗ ಯಾವುದೇ ವಿಷಯವಿಲ್ಲದ ಖಾಲಿ ಬಿಳಿ ಪರದೆ (Blank Screen) ಕಾಣಿಸಿಕೊಂಡರೆ, ಇನ್ನು ಕೆಲವರಿಗೆ ಗಂಟೆಗಳ ಹಿಂದಿನ ಹಳೆಯ ಪೋಸ್ಟ್‌ಗಳೇ ಪದೇ ಪದೇ ಸಿಗುತಿತ್ತು. ಪ್ರೊಫೈಲ್ ಪೇಜ್‌ಗಳು ಓಪನ್ ಆಗುತ್ತಿಲ್ಲ ಮತ್ತು ಸರ್ಚ್ ಬಾರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದರು.
ಬಳಕೆದಾರರ ಪರದಾಟ
ಮೊದಲಿಗೆ ಇದು ತಮ್ಮ ಇಂಟರ್ನೆಟ್ ಅಥವಾ ಮೊಬೈಲ್ ಫೋನ್‌ನ ಸಮಸ್ಯೆ ಎಂದು ಭಾವಿಸಿದ ಬಳಕೆದಾರರು, ಫೋನ್‌ಗಳನ್ನು ರೀಸ್ಟಾರ್ಟ್ ಮಾಡುವ ಕಸರತ್ತು ನಡೆಸಿದರು. ಆದರೆ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಇತರ ವೇದಿಕೆಗಳಲ್ಲಿ ‘Twitter Down’ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದ್ದಂತೆಯೇ ಇದು ಜಾಗತಿಕ ಸರ್ವರ್ ಸಮಸ್ಯೆ ಎಂಬುದು ಖಚಿತವಾಯಿತು. ತುರ್ತು ಅಪ್‌ಡೇಟ್‌ಗಳಿಗಾಗಿ ಎಲಾನ್ ಮಸ್ಕ್ ಅವರ ಈ ಪ್ಲಾಟ್‌ಫಾರ್ಮ್ ಮೇಲೆ ಅವಲಂಬಿತವಾಗಿರುವ ಪತ್ರಕರ್ತರು, ರಾಜಕಾರಣಿಗಳು ಹಾಗೂ ಸಾರ್ವಜನಿಕರಿಗೆ ಈ ಸ್ಥಗಿತವು ಭಾರೀ ಅಡಚಣೆ ಉಂಟುಮಾಡಿದೆ.
ಈ ತಾಂತ್ರಿಕ ವೈಫಲ್ಯದ ಬಗ್ಗೆ ಎಕ್ಸ್ ಸಂಸ್ಥೆ ಅಥವಾ ಎಲಾನ್ ಮಸ್ಕ್ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಸರ್ವರ್ ಅಪ್‌ಡೇಟ್ ಅಥವಾ ಸಾಫ್ಟ್‌ವೇರ್ ಬಗ್‌ನಿಂದ ಈ ರೀತಿ ಆಗಿರಬಹುದು ಎಂದು ತಜ್ಞರು ಊಹಿಸುತ್ತಿದ್ದಾರೆ. ನೀವು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ಪದೇ ಪದೇ ಪೇಜ್ ರಿಫ್ರೆಶ್ ಮಾಡುವ ಬದಲು ಅಥವಾ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡುವ ಬದಲು, ಸರ್ವರ್ ಸುಸ್ಥಿತಿಗೆ ಬರುವವರೆಗೆ ಸ್ವಲ್ಪ ಸಮಯ ಕಾಯುವುದು ಸೂಕ್ತ.
