ಮಂಡ್ಯ, ಮಾರ್ಚ್ 11: ಮಂಡ್ಯ ಜಿಲ್ಲೆಯ ಮರಳಗಾಲದಲ್ಲಿ ಅರ್ಚಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ತನ್ನ ಕಾಮದಾಟಕ್ಕೆ ಅಡ್ಡಿಯಾಗಬಾರೆಂದು ಪ್ರಿಯಕರನಿಂದಲೇ ಪತಿಯನ್ನು ಕೊಲೆ ಮಾಡಿಸಿರುವುದಾಗಿ ತಿಳಿದು ಬಂದಿದೆ..
ಮೃತರನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ. ಅವರು ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿಗಳಾಗಿ ಪತ್ನಿ ಶಾಲಿನಿ ಮತ್ತು ಆಕೆಯ ಪ್ರಿಯಕರ ಹರೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಲಿಂಗಪ್ಪ ಹಾಗೂ ಶಾಲಿನಿಗೆ ಇಬ್ಬರು ಮಕ್ಕಳು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಮಾರ್ಚ್ 6ರಂದು ಮಂಡ್ಯ ಜಿಲ್ಲೆಯ ಮರಳಗಾಲ ಸಮೀಪ ನಡೆದಿದೆ. ಮೊದಲಿಗೆ ಇದು ಅಪಘಾತ ಅಥವಾ ಅನುಮಾನಾಸ್ಪದ ಸಾವು ಎಂದು ಹೇಳಲಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆ ಮಾಡಿರುವುದಾಗಿ ಬಹಿರಂಗವಾಗಿದೆ.
ಶಾಲಿನಿ ಮತ್ತು ಅದೇ ಗ್ರಾಮದ ಹರೀಶ್ ನಡುವೆ ಬಹುಕಾಲದಿಂದ ಅಕ್ರಮ ಸಂಬಂಧ ಇತ್ತು. ಈ ವಿಷಯ ಸಿದ್ದಲಿಂಗಪ್ಪನ ಗಮನಕ್ಕೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಬಂದಿದೆ. ಆ ವೇಳೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಸಿದ್ದಲಿಂಗಪ್ಪ ಪತ್ನಿಗೆ ಹಲವು ಬಾರಿ ಬುದ್ಧಿವಾದ ಹೇಳಿ, ಸರಿದಾರಿಗೆ ತರಲು ಯತ್ನಿಸಿದ್ದರು. ಕುಟುಂಬವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದರೂ, ಶಾಲಿನಿ ತನ್ನ ಸಂಬಂಧವನ್ನು ಮುಂದುವರಿಸಿದ್ದಾಳೆ ಎಂದು ತಿಳಿದುಬಂದಿದೆ.
ತನ್ನ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣದಿಂದ ಅವನನ್ನೇ ಮುಗಿಸಲು ಶಾಲಿನಿ ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ದಿನ ಸಿದ್ದಲಿಂಗಪ್ಪ ಪೂಜೆ ಕಾರ್ಯಕ್ಕಾಗಿ ಪಕ್ಕದ ಊರಿಗೆ ತೆರಳಿದ್ದರು. ಈ ವಿಚಾರವನ್ನು ಶಾಲಿನಿ ತನ್ನ ಪ್ರಿಯಕರ ಹರೀಶ್‌ಗೆ ಮೆಸೇಜ್ ಮೂಲಕ ತಿಳಿಸಿದ್ದಳು.
ಸಿದ್ದಲಿಂಗಪ್ಪ ಬೈಕ್‌ನಲ್ಲಿ ನಾಲೆ ಏರಿ ಮನೆ ಕಡೆ ಬರುತ್ತಿದ್ದಾಗ, ಹರೀಶ್ ಮತ್ತು ಅವನ ಇಬ್ಬರು ಸ್ನೇಹಿತರು ದಾರಿ ಮಧ್ಯೆ ಅಡ್ಡಗಟ್ಟಿದ್ದಾರೆ. ಬಳಿಕ ದೊಣ್ಣೆಯಿಂದ ತಲೆಗೆ ಹೊಡೆದು ಸಿದ್ದಲಿಂಗಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಸಮೀಪದ ಸಿಡಿಎಸ್ ನಾಲೆಗೆ ಎಸೆದು ಅಪಘಾತದಂತೆ ಬಿಂಬಿಸಿದ್ದರು..
ಸಿದ್ದಲಿಂಗಪ್ಪ ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಈ ವೇಳೆ ಗ್ರಾಮದ ಸಮೀಪದ ಸಿಡಿಎಸ್ ನಾಲೆ ದಡದಲ್ಲಿ ಅವರ ಚಪ್ಪಲಿ ಹಾಗೂ ಕೆಲವು ಬಟ್ಟೆಗಳು ಪತ್ತೆಯಾದವು. ನಂತರ ನಾಲೆಯಲ್ಲಿ ಸಿದ್ದಲಿಂಗಪ್ಪನ ಮೃತದೇಹ ಮತ್ತು ಬೈಕ್ ಪತ್ತೆಯಾಯಿತು.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಚಪ್ಪಲಿ ಸಿಕ್ಕಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದವು. ಇದರಿಂದ ಪ್ರಕರಣದ ಮೇಲೆ ಅನುಮಾನ ಹೆಚ್ಚಾಯಿತು. ನಂತರ ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಇಬ್ಬರೂ ಕೊಲೆ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
