ಧರ್ಮಸ್ಥಳದ ಅಸಹಜ ಸಾವು ಸತ್ಯಾವಾ..ಸುಳ್ಳಾ ಅನ್ನೋದು ಗೊತ್ತಾಗಬೇಕು: ವಿ.ಎಸ್ ಉಗ್ರಪ್ಪ

Untitled design 2025 08 09t200826.136

ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಅಸಹಜ ಸಾವು ನಡೆದಿದೆ ಎನ್ನಲಾದ ಕುರಿತಾದ ಆರೋಪಗಳು ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿವೆ. ಈ ಗಂಭೀರ ಆರೋಪಗಳ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಈ ಕ್ರಮವನ್ನು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಸ್ವಾಗತಿಸಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲು ತನಿಖೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ವಿ.ಎಸ್. ಉಗ್ರಪ್ಪ ಅವರು ತಮ್ಮ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ವಿವರಿಸಿದ್ದಾರೆ. “ನಾನು ಈ ಆರೋಪಗಳ ಕುರಿತು ವರದಿ ಸಲ್ಲಿಸಿದ್ದೆ. ನಮ್ಮ ಕಮಿಟಿಯು ಪೊಲೀಸ್ ಅಧಿಕಾರಿಗಳನ್ನು ಕರೆಸಿ ಮಾಹಿತಿ ಸಂಗ್ರಹಿಸಿತ್ತು. ಆಗ ಧರ್ಮಸ್ಥಳದಲ್ಲಿ 100 ಅಸಹಜ ಸಾವುಗಳು ಸಂಭವಿಸಿವೆ ಎಂದು ತಿಳಿದುಬಂತು. ಆದರೆ, ನಂತರದ ಮಾಹಿತಿಯಲ್ಲಿ 450ಕ್ಕೂ ಅಧಿಕ ಅಸಹಜ ಸಾವುಗಳು ನಡೆದಿರುವ ಸಾಧ್ಯತೆ ಇದೆ ಎಂದು ಬೆಳಕಿಗೆ ಬಂದಿತ್ತು. ಇದರಿಂದ ಧರ್ಮಸ್ಥಳದಲ್ಲಿ ಏನೋ ಸಂಭವಿಸುತ್ತಿದೆ ಎಂಬ ಅನುಮಾನ ಮೂಡಿತ್ತು,” ಎಂದು ಉಗ್ರಪ್ಪ ಹೇಳಿದ್ದಾರೆ.

ರಾಜ್ಯ ಸರ್ಕಾರವು ಈ ಗಂಭೀರ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿದೆ. ಈ ತನಿಖಾ ತಂಡವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಂತಿ ನೇತೃತ್ವ ವಹಿಸಿದ್ದು, ಇದರಲ್ಲಿ ಎಂ.ಎನ್. ಅನುಚೇತ್, ಸೌಮ್ಯಲತಾ, ಮತ್ತು ಜಿತೇಂದ್ರ ಕುಮಾರ್ ಸೇರಿದಂತೆ ಒಟ್ಟು 20 ಖಡಕ್ ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದರು.

ಈ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಬ್ಬ ಅನಾಮಿಕ ವ್ಯಕ್ತಿಯು ಬೆಳ್ತಂಗಡಿ ನ್ಯಾಯಾಲಯದಲ್ಲಿ ನೂರಾರು ಮೃತದೇಹಗಳನ್ನು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತ್ತಿಟ್ಟಿದ್ದಾಗಿ ಹೇಳಿಕೆ ನೀಡಿದ್ದಾನೆ. ಈ ಆರೋಪವು ಸುಪ್ರೀಂ ಕೋರ್ಟ್‌ವರೆಗೆ ತಲುಪಿದ್ದು, ಕಾನೂನಿನ ಪ್ರಕಾರ ತನಿಖೆ ನಡೆಸುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ, ಉಗ್ರಪ್ಪ ಅವರು, “ತನಿಖೆಯ ಸಮಯದಲ್ಲಿ ಮೂರನೇ ವ್ಯಕ್ತಿಗಳು ಮಾತನಾಡುವುದು ಸರಿಯಲ್ಲ. ತನಿಖೆಯ ಪರ-ವಿರೋಧ ಚರ್ಚೆಯೂ ಸೂಕ್ತವಲ್ಲ. ಧರ್ಮಸ್ಥಳ ಒಂದು ಪವಿತ್ರ ಕ್ಷೇತ್ರವಾಗಿದ್ದು, ಇಂತಹ ಆರೋಪಗಳಿಂದ ಅನುಮಾನ ಮೂಡಿರುವುದರಿಂದ ಸತ್ಯ ಬೆಳಕಿಗೆ ಬರಬೇಕು,” ಎಂದು ಹೇಳಿದ್ದಾರೆ.

ಉಗ್ರಪ್ಪ ಅವರು “ಈ ತನಿಖೆಗೆ ಶ್ರೀ ಮಂಜುನಾಥನೇ ಪ್ರೇರಣೆಯಾಗಿರಬಹುದು. ಸತ್ಯ ಹೊರಬರಲಿ ಎಂದು ಆ ದೇವರೇ ನಿರ್ಧಾರ ಮಾಡಿರಬಹುದು,” ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. “ಸರ್ಕಾರವು ಯಾರನ್ನೂ ಗುರಿಯಾಗಿಸುವ ಉದ್ದೇಶದಿಂದ ಎಸ್‌ಐಟಿ ರಚಿಸಿಲ್ಲ. ಕಾಂಗ್ರೆಸ್ ಯಾವುದೇ ಪಂಥಕ್ಕೆ ಸೀಮಿತವಾಗಿಲ್ಲ. ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ,” ಎಂದು ಉಗ್ರಪ್ಪ ತಿಳಿಸಿದ್ದಾರೆ.

Exit mobile version