ಯೋಗೇಶ್ ಗೌಡ ಹ*ತ್ಯೆ ಕೇಸ್‌‌ನಲ್ಲಿ ವಿನಯ್ ಕುಲಕರ್ಣಿ ಅಪರಾಧಿ: ಇಂದು ಶಿಕ್ಷೆಯ ಪ್ರಮಾಣ ಪ್ರಕಟ

Untitled design 2026 04 16T082426.103

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಬುಧವಾರ ಪ್ರಕಟವಾದ ಈ ತೀರ್ಪಿನ ಬಳಿಕ, ಇಂದು (ಏಪ್ರಿಲ್ 16) ಅಪರಾಧಿಗಳಿಗೆ ಎಷ್ಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ನ್ಯಾಯಾಲಯ ಅಧಿಕೃತವಾಗಿ ಪ್ರಕಟಿಸಲಿದೆ.

2016ರ ಭೀಕರ ಕೊಲೆ ಪ್ರಕರಣ

2016ರ ಜೂನ್ 15ರಂದು ಧಾರವಾಡದಲ್ಲಿ ಯೋಗೇಶ್ ಗೌಡ ಅವರನ್ನು ಜಿಮ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆ ನಡೆದ ಸಮಯದಲ್ಲಿ ವಿನಯ್ ಕುಲಕರ್ಣಿ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೂ, ನಂತರ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಸಿಬಿಐ ತನಿಖೆಯನ್ನು ಚುರುಕುಗೊಳಿಸಿ, 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತು.

ನ್ಯಾಯಾಲಯದ ತೀರ್ಪು

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಬುಧವಾರ (ಏಪ್ರಿಲ್ 15) ತೀರ್ಪು ಪ್ರಕಟಿಸಿದೆ. ಕಳೆದ ಮಾರ್ಚ್ ನಿಂದ ನಿರಂತರವಾಗಿ ನಡೆದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಏಪ್ರಿಲ್ 15ರಂದು ತೀರ್ಪು ನೀಡುವುದಾಗಿ ತಿಳಿಸಿತ್ತು. ಅದರಂತೆ ಪ್ರಕರಣದ ಎಲ್ಲ 21 ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಿದ್ದರು. ವಿಚಾರಣೆ ವೇಳೆ ಲಭ್ಯವಾದ ಸಾಕ್ಷ್ಯಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ವಿನಯ್ ಕುಲಕರ್ಣಿ ಅವರು ಕೊಲೆಯ ಸಂಚಿನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ಹೇಳಿದೆ. ಒಟ್ಟು 21 ಆರೋಪಿಗಳ ಪೈಕಿ 19 ಮಂದಿ ದೋಷಿಗಳೆಂದು ತೀರ್ಪು ನೀಡಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯ ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.

ಶಿಕ್ಷೆಯ ಪ್ರಮಾಣದ ಕುತೂಹಲ:

ದೋಷಿಗಳ ಪೈಕಿ ವಿನಯ್ ಕುಲಕರ್ಣಿ ಪ್ರಮುಖರಾಗಿದ್ದಾರೆ. ಈಗಾಗಲೇ ಒಂಬತ್ತು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಕುಲಕರ್ಣಿ ಹೊರಬಂದಿದ್ದರು. ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಮೊದಲು ವಾದ-ಪ್ರತಿವಾದಗಳನ್ನು ನ್ಯಾಯಾಲಯ ಆಲಿಸಲಿದೆ. ಪ್ರಾಸಿಕ್ಯೂಷನ್ ಪರ ಮತ್ತು ಡಿಫೆನ್ಸ್ ಪರ ವಕೀಲರು ಶಿಕ್ಷೆಯ  ಬಗ್ಗೆ ತಮ್ಮ ವಾದಗಳನ್ನು ಮಂಡಿಸಲಿದ್ದಾರೆ. ಅನಂತರ ನ್ಯಾಯಾಧೀಶರು ಅಂತಿಮವಾಗಿ ಶಿಕ್ಷೆಯ ಅವಧಿಯನ್ನು ನಿರ್ಧರಿಸಲಿದ್ದಾರೆ.

Exit mobile version