ವಿಜಯನಗರ: ಆಸ್ತಿಗಾಗಿ ಅಥವಾ ಮತ್ಯಾವುದೋ ವೈಯಕ್ತಿಕ ದ್ವೇಷಕ್ಕಾಗಿ ತನ್ನ ಹೆತ್ತ ತಂದೆ-ತಾಯಿ ಮತ್ತು ಪ್ರೀತಿಯ ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆಯ ಒಳಗಡೆಯೇ ಮೂರು ಶವಗಳನ್ನ ಹೂತಿಹಾಕಿರುವ ಘಟನೆ ನಡೆದಿದೆ.
ಪ್ರತ್ಯೇಕವಾಗಿ ಮೂವರ ಕೊಲೆ
ಜನವರಿ 27 ರಂದು ಕೊಟ್ಟೂರಿನ ಎಲ್.ಬಿ. ಬಡಾವಣೆಯ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಅಕ್ಷಯ್ ಕುಮಾರ್ ಒಬ್ಬೊಬ್ಬರನ್ನೇ ಗುರಿಯಾಗಿಸಿಕೊಂಡು ಕೊಲೆಗೈದಿದ್ದಾನೆ. ಮೊದಲಿಗೆ ತಾಯಿ ಜಯಲಕ್ಷ್ಮೀಯನ್ನು ಚಾಕುವಿನಿಂದ ಇರಿದು ಕೊಂದು ಶವವನ್ನು ಒಂದು ಕೊಠಡಿಯಲ್ಲಿರಿಸಿದ್ದಾನೆ. ನಂತರ ತಂಗಿ ಅಮೃತಾಗೆ ಕರೆ ಮಾಡಿ, ನಿನಗೆ ಸರ್ಪ್ರೈಸ್ ಗಿಫ್ಟ್ ತಂದಿದ್ದೇನೆ, ಮನೆಗೆ ಬಾ ಎಂದು ನಂಬಿಸಿ ಕರೆಸಿದ್ದಾನೆ. ಮನೆಗೆ ಬಂದ ತಂಗಿಯನ್ನೂ ಚಾಕುವಿನಿಂದ ಇರಿದು ಸಾಯಿಸಿದ್ದಾನೆ ಕೊನೆಯದಾಗಿ ಮನೆಯಲ್ಲಿ ಟಿವಿ ನೋಡುತ್ತಿದ್ದ ತಂದೆ ಭೀಮರಾಜ್ ಅವರನ್ನು ಕೊಲೆ ಮಾಡಿದ್ದಾನೆ. ಹೀಗೆ ಮೂವರನ್ನು ಕೊಂದ ಬಳಿಕ, ಮನೆಯ ಹಾಲ್‌ನಲ್ಲಿ ದೊಡ್ಡ ಗುಂಡಿ ತೋಡಿ ಮೂವರ ಮೃತದೇಹಗಳನ್ನು ಒಂದೇ ಕಡೆ ಹೂತು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ.
ಬೆಂಗಳೂರಿನಲ್ಲಿ ಮಿಸ್ಸಿಂಗ್ ಡ್ರಾಮಾ
ಕೊಲೆ ಮಾಡಿದ ಬಳಿಕ ಯಾರೂ ಸಂಶಯ ಪಡಬಾರದು ಎಂಬ ಕಾರಣಕ್ಕೆ ಅಕ್ಷಯ್ ಬೆಂಗಳೂರಿಗೆ ತೆರಳಿದ್ದ. ಅಲ್ಲಿನ ತಿಲಕ್ ನಗರ ಪೊಲೀಸ್ ಠಾಣೆಗೆ ಹೋಗಿ, ತನ್ನ ತಂದೆ-ತಾಯಿ ಮತ್ತು ತಂಗಿ ಜಯದೇವ ಆಸ್ಪತ್ರೆಗೆ ಹೋದವರು ನಾಪತ್ತೆಯಾಗಿದ್ದಾರೆ ಎಂದು ಮಿಸ್ಸಿಂಗ್ ಕೇಸ್ ದಾಖಲಿಸಿದ್ದ. ಆದರೆ ಪೊಲೀಸರು ವಿಚಾರಣೆ ನಡೆಸುವಾಗ ಆತ ನೀಡುತ್ತಿದ್ದ ಹೇಳಿಕೆಗಳಲ್ಲಿ ದ್ವಂದ್ವವಿತ್ತು. ಪೊಲೀಸರು ಸ್ವಲ್ಪ ಕಟ್ಟುನಿಟ್ಟಾಗಿ ವಿಚಾರಿಸಿದಾಗ ಆತ ನಡೆಸಿದ್ದ ಈ ಭೀಕರ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸ್ ಕಾರ್ಯಾಚರಣೆ ಮತ್ತು ಮಹಜರು
ಆರೋಪಿ ನೀಡಿದ ಮಾಹಿತಿಯ ಮೇರೆಗೆ ಶನಿವಾರ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್.ಜಾಹ್ನವಿ ಮತ್ತು ತಿಲಕ್ ನಗರ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಶವಗಳನ್ನು ಹೊರತೆಗೆಯಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸದ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎಫ್‌ಐಆರ್‌ನಲ್ಲಿ ಅಕ್ಷಯ್ ಸೇರಿದಂತೆ ಇಬ್ಬರ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆಯ ಹಿಂದೆ ಹಣಕಾಸಿನ ವ್ಯವಹಾರವಿದೆಯೇ ಅಥವಾ ಕುಟುಂಬದ ಕಲಹವಿದೆಯೇ ಎಂಬುದು ಇನ್ನೂ ನಿಗೂಢವಾಗಿದೆ. ಪ್ರಕರಣವು ತನಿಖಾ ಹಂತದಲ್ಲಿದ್ದು, ಶೀಘ್ರದಲ್ಲೇ ನಿಖರ ಕಾರಣ ತಿಳಿಸಲಾಗುವುದು ಎಂದು ಎಸ್‌ಪಿ ಜಾಹ್ನವಿ ತಿಳಿಸಿದ್ದಾರೆ.
