ಕಪ್ಪೆ ಚಿಪ್ಪು ತೆಗೆಯಲು ಹೋಗಿ 8 ಮಂದಿ ಜಲಸಮಾಧಿ, ಇಬ್ಬರು ನಾಪತ್ತೆ

ಭಟ್ಕಳ: ಕಪ್ಪೆ ಚಿಪ್ಪು (ಮೀನು ಅಥವಾ ಸಿಪ್ಪೆ) ಸಂಗ್ರಹಿಸಲು ಹೋದ ಒಂದೇ ಕುಟುಂಬದ ಸದಸ್ಯರು ಸೇರಿ ಒಟ್ಟು 8 ಮಂದಿ ಜಲಸಮಾಧಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆ ಹಕ್ಕಲು ನದಿ ಮತ್ತು ವೆಂಕಟಾಪುರ ನದಿ ಸಂಗಮ ಭಾಗದಲ್ಲಿ ನಡೆದಿದೆ.

ಶಿರಾಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ಸುಮಾರು 13ರಿಂದ 14 ಜನರ ಗುಂಪು ನದಿಯ ಬಳಿಗೆ ಕಪ್ಪೆ ಚಿಪ್ಪು ಸಂಗ್ರಹಕ್ಕಾಗಿ ತೆರಳಿದ್ದರು. ನೀರಿನ ಹರಿವು ಮತ್ತು ಅಲೆಗಳ ತೀವ್ರತೆ ಏಕಾಏಕಿ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.

ಈ ವೇಳೆ ಇಬ್ಬರು ಮೊದಲಿಗೆ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಮತ್ತೊಬ್ಬರು ಮುಂದಾಗಿದ್ದು, ನಂತರ ಒಬ್ಬರ ಹಿಂದೆ ಒಬ್ಬರು ಸಹಾಯಕ್ಕೆ ಇಳಿದಿದ್ದಾರೆ. ಆದರೆ ನೀರಿನ ಹರಿವು ಮತ್ತು ಅಲೆಗಳ ಹೊಡೆತದಿಂದ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ದುರಂತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ನಂತರದ ಮೃತರ ಸಂಖ್ಯೆ ಹೆಚ್ಚಾಗಿ ಎಂಟು ಜನರವರೆಗೆ ಏರಿಕೆಯಾಗಿದೆ. ಮೃತರಲ್ಲಿ ಹೆಚ್ಚಿನವರು ಒಂದೇ ಕುಟುಂಬದವರು ಎನ್ನಲಾಗಿದೆ.

ಇನ್ನು ಹಲವರು ನೀರಿನಲ್ಲಿ ನಾಪತ್ತೆಯಾಗಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಸೇರಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೆಲವರನ್ನು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

Exit mobile version