ಬೆಂಗಳೂರು: ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆವರೆಗೂ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಇಂದು ಬೆಳಿಗ್ಗೆ ಮೃತದೇಹಗಳಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಅನಿಕೇತ್ ಕುಮಾರ್ (12) ಹಾಗೂ ರೆಹಮಾತ್ ಬಾಬಾ (11) ಎಂದು ಗುರುತಿಸಲಾಗಿದೆ. ಅನಿಕೇತ್ ಕುಮಾರ್ ಬಿಹಾರ ಮೂಲದವರಾಗಿದ್ದು, ರೆಹಮಾತ್ ಬಾಬಾ ಆಂಧ್ರಪ್ರದೇಶದ ಕದಿರಿ ಮೂಲದವನೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರ ಮಕ್ಕಳಾದ ಇವರು, ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಬಳ್ಳೂರು ಗ್ರಾಮದ ಬಳಿ ವಾಸಿಸುತ್ತಿದ್ದರು.
ನಿನ್ನೆ ಸಂಜೆ ಅನಿಕೇತ್ ಮತ್ತು ರೆಹಮಾತ್ ತಮ್ಮ ಮನೆಗಳ ಹತ್ತಿರದ ಆವರಣದಲ್ಲಿ ಆಟವಾಡುತ್ತಿದ್ದರು. ಆಟದ ಮಧ್ಯೆ ಇಬ್ಬರೂ ಗ್ರಾಮದ ಕೆರೆಯತ್ತ ತೆರಳಿದ್ದಾರೆ. ಈ ವೇಳೆ ಕೆರೆಗೆ ಇಳಿದ ಮಕ್ಕಳು ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಸಂಜೆ ವೇಳೆಯಾದರೂ ಮಕ್ಕಳು ಮನೆಗೆ ಹಿಂತಿರುಗದಿರುವುದು ಪೋಷಕರಲ್ಲಿ ಅನುಮಾನ ಮೂಡಿದ್ದು, ಆತಂಕಗೊಂಡ ಪೋಷಕರು ಹಾಗೂ ನೆರೆಮನೆಯವರು ರಾತ್ರಿ ಪೂರ್ತಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಇಂದು ಬೆಳಿಗ್ಗೆ ಗ್ರಾಮಸ್ಥರಲ್ಲಿ ಕೆಲವರು ಕೆರೆಯ ಬಳಿ ಹೋದಾಗ ನೀರಿನಲ್ಲಿ ಎರಡು ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
