ಜ್ಯೋತಿಷಿಯ ಮಾತು ಕೇಳಿ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು

ತುಮಕೂರು: ಮಗಳು ಅಂದರೆ ತಂದೆ-ತಾಯಿಗೆ ಆಸರೆಯಾಗಬೇಕಿದ್ದವಳು, ಆದರೆ ಇಲ್ಲಿ ಮಗಳೇ ಹೆತ್ತ ತಾಯಿಯನ್ನ ಕೊಲೆ ಮಾಡಿದ್ದಾಳೆ. ಜ್ಯೋತಿಷಿಯೊಬ್ಬರು ಹೇಳಿದ ಮೂಢನಂಬಿಕೆಯ ಮಾತುಗಳಿಗೆ ಮರುಳಾದ ಮಗಳೊಬ್ಬಳು, ತನ್ನ ತಾಯಿಯನ್ನೇ ಹಂತಕಿ ಎಂದು ಭಾವಿಸಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ

ತುಮಕೂರು ನಗರದ ಬಂಡೇಪಾಳ್ಯದ ಶ್ರೀನಗರ ನಿವಾಸಿ ಪುಷ್ಪಲತಾ ಅವರು ಸ್ವಂತ ಮನೆಯಲ್ಲಿ ಮಗಳು ಸುಚಿತ್ರಾ ಹಾಗೂ ಅಳಿಯ ಸುರೇಶ್ ಜೊತೆ ವಾಸವಿದ್ದರು. ಮಗಳು ಸುಚಿತ್ರಾ ತನ್ನ ತಂದೆ ಬಾಬು ನಾಯಕ್ ಅವರನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ಒಂದು ವರ್ಷದ ಹಿಂದೆ ಬಾಬು ನಾಯಕ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಸುಚಿತ್ರಾ, ತಂದೆಯ ಅಗಲಿಕೆಗೆ ಕಾರಣ ತಿಳಿಯಲು ಜ್ಯೋತಿಷಿಯೊಬ್ಬರ ಬಳಿ ಹೋಗಿದ್ದರು.

ಕೊಲೆಗೆ ಪ್ರಚೋದನೆ ನೀಡಿದ ಜ್ಯೋತಿಷ್ಯದ ಮಾತು

ಸುಚಿತ್ರಾ ಭೇಟಿ ಮಾಡಿದ್ದ ಜ್ಯೋತಿಷಿ, ನಿನ್ನ ತಂದೆಯ ಸಾವಿಗೆ ನಿನ್ನ ತಾಯಿಯೇ ಕಾರಣ. ಆಕೆ ಮಾಟಮಂತ್ರ ಮಾಡಿಸಿದ್ದರಿಂದಲೇ ನಿನ್ನ ತಂದೆ ಸತ್ತಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿನಗೂ ಆಕೆಯಿಂದ ಜೀವಕ್ಕೆ ಅಪಾಯವಿದೆ ಎಂದು ನಂಬಿಸಿದ್ದರು. ಈ ಮಾತು ಸುಚಿತ್ರಾಳನ್ನ ಬಹಳ ಕಾಡಿತ್ತು.

ಕೊಲೆ ನಡೆದಿದ್ದು ಹೇಗೆ ?

ಫೆಬ್ರವರಿ 11ರ ರಾತ್ರಿ ಮಂಡಿನೋವಿನಿಂದ ಹಾಸಿಗೆ ಹಿಡಿದಿದ್ದ ತಾಯಿ ಪುಷ್ಪಲತಾ ಅವರು ಊಟ ಮುಗಿಸಿ ಮಲಗಿದ್ದರು. ಈ ವೇಳೆ ಹೊಂಚು ಹಾಕಿದ್ದ ಸುಚಿತ್ರಾ, ಮಲಗಿದ್ದ ತಾಯಿಯ ಮುಖಕ್ಕೆ ದಿಂಬಿನಿಂದ ಬಲವಾಗಿ ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಈ ಸಂದರ್ಭದಲ್ಲಿ ನಡೆದ ಸಂಘರ್ಷದಲ್ಲಿ ಪುಷ್ಪಲತಾ ಅವರ ಮುಖದ ಮೇಲೆ ರಕ್ತದ ಗಾಯಗಳೂ ಆಗಿದ್ದವು. ಈ ಘೋರ ಕೃತ್ಯಕ್ಕೆ ಆಕೆಯ ಪತಿ ಸುರೇಶ್ ಕೂಡ ಸಾಕ್ಷಿಯಾಗಿದ್ದ ಎನ್ನಲಾಗಿದೆ.

ಕೊಲೆಯ ನಂತರ ಯಾರಿಗೂ ಅನುಮಾನ ಬರಬಾರದೆಂದು ಸುಚಿತ್ರಾ ತನ್ನ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿಸಿದ್ದಾಳೆ. ಅಲ್ಲದೆ, ಅವಸರವಸರವಾಗಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾಳೆ. ಆದರೆ, ಸುಚಿತ್ರಾಳ ಅತಿಯಾದ ಆತುರ ಮತ್ತು ಮೃತದೇಹದ ಮೇಲಿದ್ದ ರಕ್ತದ ಕಲೆಗಳನ್ನು ಗಮನಿಸಿದ ಸ್ಥಳೀಯರು ಕೂಡಲೇ ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಪರೀಕ್ಷಿಸಿದಾಗ ಅದು ಸಹಜ ಸಾವಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೂಡಲೇ ಸುಚಿತ್ರಾ ಮತ್ತು ಸುರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜ್ಯೋತಿಷಿಯ ಮಾತು ಕೇಳಿ ತಾಯಿಯನ್ನು ಕೊಂದ ಅಸಲಿ ಸತ್ಯ ಬಯಲಾಗಿದೆ. ಸದ್ಯ ದಂಪತಿಗಳಿಬ್ಬರನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Exit mobile version