ಟ್ರಕ್ಕಿಂಗ್‌ಗೆ ಬಂದು ರಾಮನಗರ ಬೆಟ್ಟದಲ್ಲಿ ದಾರಿ ತಪ್ಪಿದ ಯುವಕನ ರಕ್ಷಣೆ

Untitled Design 2026 11 15T184107.963

ರಾಮನಗರ: ಬಿಡುವಿನ ಸಮಯವನ್ನು ಸಾಹಸಮಯ ಟ್ರೆಕ್ಕಿಂಗ್‌ನಲ್ಲಿ ಕಳೆಯಲು ಬೆಟ್ಟಕ್ಕೆ ತೆರಳಿದ್ದ ಒಡಿಶಾ ಮೂಲದ ಯೂಟ್ಯೂಬರ್‌ ಒಬ್ಬರು ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿದ ಘಟನೆ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಅರಣ್ಯ ಪ್ರದೇಶದಲ್ಲಿ ದಾರಿ ಕಾಣದೆ ಕಂಗಾಲಾಗಿದ್ದ ಯುವಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ರೋಪ್ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಒಡಿಶಾ ಮೂಲದ ಬಿಸ್ವಾಜಿತ್ ನಾಥ್ ರಕ್ಷಿಸಲ್ಪಟ್ಟ ಯೂಟ್ಯೂಬರ್. ವಿಕೇಂಡ್‌ ಹಿನ್ನೆಲೆ ಬೆಂಗಳೂರಿನಿಂದ ಬೈಕ್‌ನಲ್ಲಿ ಒಬ್ಬರೇ ಬಂದಿದ್ದ ಅವರು, ಬೆಳಿಗ್ಗೆ ಹನುಮಂತರಾಯಸ್ವಾಮಿ ಬೆಟ್ಟದ ಬಳಿ ಬೈಕ್ ನಿಲ್ಲಿಸಿ ಟ್ರೆಕ್ಕಿಂಗ್ ಆರಂಭಿಸಿದ್ದರು. ಬೆಟ್ಟದ ಮೇಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಉದ್ದೇಶದಿಂದ ಸಾಹಸಮಯವಾಗಿ ಬೆಟ್ಟ ಹತ್ತಲು ಮುಂದಾಗಿದ್ದರು. ಆದರೆ, ಬೆಟ್ಟದ ಅರಣ್ಯ ಪ್ರದೇಶದೊಳಗೆ ಸಾಗುತ್ತಿದ್ದಂತೆ ವಾಪಸ್ ಕೆಳಗಿಳಿಯುವ ದಾರಿ ಕಾಣದೆ ಗೊಂದಲಕ್ಕೆ ಒಳಗಾಗಿದ್ದಾರೆ.

ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ್ದ ಬಿಸ್ವಾಜಿತ್, ಬೆಟ್ಟದ ಮಧ್ಯೆ ಸಿಲುಕಿಕೊಂಡು ಏನು ಮಾಡಬೇಕೆಂದು ತೋಚದೆ ಆತಂಕಗೊಂಡಿದ್ದರು. ತಾವು ಬಂದ ದಾರಿ ಯಾವುದು, ಕೆಳಗೆ ಇಳಿಯುವುದು ಹೇಗೆ ಎಂಬುದು ತಿಳಿಯದೆ ಪರದಾಡಿದ್ದಾರೆ. ನಂತರ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ತಾವು ಬೆಟ್ಟದಲ್ಲಿ ದಾರಿ ತಪ್ಪಿ ಸಿಲುಕಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ಆರಂಭ

ಯುವಕನಿಂದ ಕರೆ ಬಂದ ತಕ್ಷಣ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕೂಡಲೇ ಬೆಟ್ಟದ ತಪ್ಪಲಿಗೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು, ಯುವಕನನ್ನು ಪತ್ತೆಹಚ್ಚಲು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವು ಕೋರಿದ್ದಾರೆ. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಟ್ಟದ ಅರಣ್ಯ ಪ್ರದೇಶದಲ್ಲಿ ಯುವಕನ ಇರುವಿಕೆಯನ್ನು ಪತ್ತೆಹಚ್ಚಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬಿಸ್ವಾಜಿತ್ ಇರುವ ಸ್ಥಳವನ್ನು ಗುರುತಿಸಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಧೈರ್ಯ ತುಂಬಿದ್ದಾರೆ. ಸುಮಾರು ಒಂದು ಗಂಟೆ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಯುವಕನನ್ನು ಪತ್ತೆಹಚ್ಚುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬೆಟ್ಟದ ಪ್ರದೇಶದಲ್ಲಿ ಸುಲಭವಾಗಿ ಕೆಳಗಿಳಿಯಲು ಸಾಧ್ಯವಾಗದ ಪರಿಸ್ಥಿತಿ ಇದ್ದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ರೋಪ್ ಬಳಸಿದ್ದಾರೆ. ಹಗ್ಗದ ಸಹಾಯದಿಂದ ಎಚ್ಚರಿಕೆಯಿಂದ ಯುವಕನನ್ನು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯುವಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

‘ನಾನೇ ರಕ್ಷಣೆಗೆ ಮುಂದಾಗಿದ್ದರೆ ಬದುಕಿರುತ್ತಿರಲಿಲ್ಲ’

ರಕ್ಷಣೆ ಬಳಿಕ ಮಾತನಾಡಿದ ಬಿಸ್ವಾಜಿತ್ ನಾಥ್, ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಬಂದಿದ್ದೆ. ಆದರೆ, ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ದಾರಿ ತಪ್ಪಿಸಿಕೊಂಡೆ. ನಾನು ಸಿಲುಕಿಕೊಂಡಿದ್ದ ಸ್ಥಳದಿಂದ ನಾನೇ ಕೆಳಗಿಳಿಯಲು ಅಥವಾ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದರೆ ಬಹುಶಃ ಜೀವಂತವಾಗಿ ವಾಪಸ್ ಬರುತ್ತಿರಲಿಲ್ಲ ಎಂದು ಆತಂಕದ ಕ್ಷಣಗಳನ್ನು ವಿವರಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುವವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದರು. ಅವರ ಸಹಕಾರ ಮತ್ತು ಸಮಯೋಚಿತ ನೆರವಿನಿಂದಲೇ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು. ನನ್ನ ಜೀವ ಉಳಿಸಿದ ಕರ್ನಾಟಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

 

Exit mobile version