ಬೆಂಗಳೂರು : ಸಾರಿಗೆ ನೌಕರರ ಮನವೊಲಿಸಲು ಸರ್ಕಾರ ನಡೆಸಿದ ಸರಣಿ ಪ್ರಯತ್ನಗಳು ವಿಫಲವಾಗಿದ್ದು, ಸರ್ಕಾರ ನೀಡಿದ ಆಫರ್ ಅನ್ನು ನೌಕರರ ಒಕ್ಕೂಟಗಳು ತಿರಸ್ಕರಿಸಿವೆ. ತಮ್ಮ ಪೂರ್ಣಪ್ರಮಾಣದ ಬೇಡಿಕೆ ಈಡೇರಿಕೆಗಾಗಿ ಇಂದು ಸಾವಿರಾರು ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆಗೆ ಪೆಟ್ಟು ಬೀಲುಬ ಸಾಧ್ಯತೆ ಇದೆ.
ಸರ್ಕಾರದ ಆಫರ್ ತಿರಸ್ಕರಿಸಿದ್ದು ಯಾಕೆ ?
ಬುಧವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರವು ಒಂದು ಮಧ್ಯಂತರ ಪರಿಹಾರವನ್ನು ಮುಂದಿಟ್ಟಿತ್ತು. ನೌಕರರು 38 ತಿಂಗಳ ವೇತನ ಹಿಂಬಾಕಿ (Arrears) ಮತ್ತು 2024ರ ಜನವರಿಯಿಂದಲೇ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದರು. ಆದರೆ ಸರ್ಕಾರವು ಕೇವಲ 26 ತಿಂಗಳ ಹಿಂಬಾಕಿ ನೀಡಲು ಮತ್ತು ವೇತನ ಪರಿಷ್ಕರಣೆಯನ್ನು 2025ರ ಮಾರ್ಚ್‌ನಿಂದ ಅನ್ವಯಿಸಲು ಆದೇಶ ಹೊರಡಿಸಿತ್ತು. ಸರ್ಕಾರದ ಈ ನಡೆ ನೌಕರರಿಗೆ ಕಣ್ಣೊರೆಸುವ ತಂತ್ರದಂತೆ ಕಂಡಿದೆ. ನಮಗೆ ಬರಬೇಕಾದ ಪೂರ್ಣ ಹಕ್ಕನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ನೌಕರರ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಇಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಲ್ಕೂ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಾವಿರಾರು ನೌಕರರು ಜಮಾಯಿಸಲಿದ್ದಾರೆ. ಕೇವಲ ಬೆಂಗಳೂರಿನ ಸಿಬ್ಬಂದಿ ಮಾತ್ರವಲ್ಲದೆ, ರಾಜ್ಯದ ಮೂಲೆ ಮೂಲೆಗಳಿಂದ ನೌಕರರು ರಾಜಧಾನಿಗೆ ಆಗಮಿಸುತ್ತಿದ್ದಾರೆ. ಇದು ಕೇವಲ ಪ್ರತಿಭಟನೆಯಲ್ಲ, ಸರ್ಕಾರದ ವಿರುದ್ಧದ ಅಂತಿಮ ಎಚ್ಚರಿಕೆ ಎಂದು ನೌಕರರು ತಿಳಿಸಿದ್ದಾರೆ.
ಸಂಜೆ 4 ಗಂಟೆಯ ಗಡುವು! ಬಸ್ ಸಂಚಾರ ಬಂದ್ ಆಗುತ್ತಾ?
ನೌಕರರ ಸಂಘಟನೆಗಳು ಸರ್ಕಾರಕ್ಕೆ ಇಂದು ಸಂಜೆ 4 ಗಂಟೆಯವರೆಗೆ ಅಂತಿಮ ಗಡುವನ್ನು ನೀಡಿವೆ. ಈ ಒಳಗಾಗಿ ಸರ್ಕಾರವು ತಮ್ಮೆಲ್ಲಾ ಬೇಡಿಕೆಗಳನ್ನು (38 ತಿಂಗಳ ಹಿಂಬಾಕಿ ಹಾಗೂ 2024ರಿಂದಲೇ ವೇತನ ಪರಿಷ್ಕರಣೆ) ಈಡೇರಿಸುವ ಅಧಿಕೃತ ಭರವಸೆ ನೀಡದಿದ್ದರೆ, ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದಾರೆ. ಒಂದು ವೇಳೆ ಇದು ಸಂಭವಿಸಿದರೆ, ನಾಳೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಮುಷ್ಕರದ ಪ್ರಮುಖ ಬೇಡಿಕೆಗಳು:
-
38 ತಿಂಗಳ ಪೂರ್ಣ ವೇತನ ಹಿಂಬಾಕಿ ತಕ್ಷಣ ಪಾವತಿಸಬೇಕು.
-
2024ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು.
-
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು.
-
ಕೆಲಸದ ಅವಧಿಯ ಒತ್ತಡ ಕಡಿಮೆಗೊಳಿಸಿ ಭತ್ಯೆಗಳನ್ನು ಹೆಚ್ಚಿಸಬೇಕು.
ಸರ್ಕಾರ ನೌಕರರ ಪೂರ್ಣ ಬೇಡಿಕೆಗೆ ಮಣಿಯುತ್ತದೆಯೇ ಅಥವಾ ಮುಷ್ಕರ ಎದುರಿಸಲು ಸಜ್ಜಾಗುತ್ತದೆಯೇ ಎಂಬುದು ಇಂದಿನ ಸಂಜೆಯೊಳಗೆ ತಿಳಿಯಲಿದೆ. ಸಾರ್ವಜನಿಕರು ಪ್ರಯಾಣದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.
