ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ, ವಿಮಾನ ನಿಲ್ದಾಣದ ಕಡೆಗೆ ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ನಗರ ಸಂಚಾರಿ ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (Bengaluru International Airport Road)ಯಲ್ಲಿ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಜಾರಿಗೊಳಿಸಲಾಗಿದೆ.
ಸಂಚಾರಿ ಪೊಲೀಸ್ ಇಲಾಖೆ ಪ್ರಕಟಿಸಿದ ಮಾಹಿತಿಯಂತೆ, ಜನವರಿ 23, 2026ರಿಂದ ಜನವರಿ 25, 2026ರ ತನಕ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಈ ಮಾರ್ಗ ಬದಲಾವಣೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವಾಹನ ಸವಾರರು ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೆಬ್ಬಾಳ ಫ್ಲೈಓವರ್ ಮೇಲ್ಭಾಗದ ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಡಾಂಬರೀಕರಣ ಹಾಗೂ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಹೆಬ್ಬಾಳ ಫ್ಲೈಓವರ್ ಬೆಂಗಳೂರು ನಗರ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವುದರಿಂದ, ಇಲ್ಲಿ ಸಂಚಾರ ದಟ್ಟಣೆ ಉಂಟಾದರೆ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡಿರುವ ಸಂಚಾರಿ ಪೊಲೀಸರು, ಸಂಚಾರ ಸುಗಮವಾಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹೆಬ್ಬಾಳ ಸರ್ವೀಸ್ ರಸ್ತೆ ಹಾಗೂ ಇತರೆ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣಿಸುವಂತೆ ಸೂಚಿಸಲಾಗಿದೆ. ಜೊತೆಗೆ, ಸಂಚಾರ ನಿಯಂತ್ರಣಕ್ಕಾಗಿ ಪ್ರಮುಖ ಜಂಕ್ಷನ್‌ಗಳು ಮತ್ತು ಸಂವೇದನಶೀಲ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಂಚಾರ ಬಂದೋಬಸ್ತ್ ಮಾಡಲಾಗಿದೆ.
ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕವೂ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ವಾಹನ ಸವಾರರು ಹಾಗೂ ವಿಮಾನ ಪ್ರಯಾಣಿಕರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ರಾತ್ರಿ ಸಮಯದಲ್ಲಿ ವಿಮಾನ ಹತ್ತುವವರು ಹೆಚ್ಚುವರಿ ಸಮಯ ಮೀಸಲಿಟ್ಟು ಪ್ರಯಾಣ ಆರಂಭಿಸಬೇಕೆಂದು ಸೂಚಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆಯ ಪ್ರಮುಖ ವಿವರಗಳು
ಬೆಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳಿಗೆ ಸೂಚಿಸಲಾದ ಪರ್ಯಾಯ ಮಾರ್ಗಗಳು ಈ ಕೆಳಗಿನಂತಿವೆ.
-
ಬಿಬಿ ಮುಖ್ಯ ರಸ್ತೆ – ಸಂಜಯನಗರ ಕ್ರಾಸ್ – ಎಡ ತಿರುವು – ಸಂಜಯನಗರ ಮುಖ್ಯ ರಸ್ತೆ – ಭದ್ರಪ್ಪ ಲೇಔಟ್ – ಔಟರ್ ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ತಲುಪುವುದು.
-
ಬಿಬಿ ಮುಖ್ಯ ರಸ್ತೆ – ಸಿಬಿಐ ಸರ್ವೀಸ್ ರಸ್ತೆ / ವೆಟರ್ನರಿ ಕಾಲೇಜ್ ಜಂಕ್ಷನ್ ಸರ್ವಿಸ್ ರಸ್ತೆ – ಹೆಬ್ಬಾಳ ಬಸ್ ನಿಲ್ದಾಣ ಸರ್ವೀಸ್ ರಸ್ತೆ (ವಿಮಾನ ನಿಲ್ದಾಣ ಕಡೆಗೆ) – ಹೆಬ್ಬಾಳ ಡೌನ್ ಕ್ಯಾಂಪ್ ಮೂಲಕ ಏರ್‌ಪೋರ್ಟ್ ರಸ್ತೆಗೆ ತಲುಪುವುದು.
-
ಬಿಬಿ ಮುಖ್ಯ ರಸ್ತೆ – ವೆಟರ್ನರಿ ಕಾಲೇಜ್ ಜಂಕ್ಷನ್ ಸರ್ವಿಸ್ ರಸ್ತೆ – ಕೆ-2 ಬಸ್ ನಿಲ್ದಾಣ ಎಡ ತಿರುವು – ಭೂಪಸಂದ್ರ ರಸ್ತೆ – ಬಲ ತಿರುವು – ಭದ್ರಪ್ಪ ಲೇಔಟ್ – ಔಟರ್ ರಿಂಗ್ ರೋಡ್ ಮೂಲಕ ಏರ್‌ಪೋರ್ಟ್ ರಸ್ತೆಗೆ ತಲುಪುವುದು.
-
ಬಿಬಿ ಮುಖ್ಯ ರಸ್ತೆ – ಸಿಬಿಐ ಸರ್ವಿಸ್ ರಸ್ತೆ / ವೆಟರ್ನರಿ ಕಾಲೇಜ್ ಜಂಕ್ಷನ್ ಸರ್ವಿಸ್ ರಸ್ತೆ – ಹೆಬ್ಬಾಳ ಬಸ್ ನಿಲ್ದಾಣ ಸರ್ವಿಸ್ ರಸ್ತೆ – ಕೆ.ಆರ್.ಪುರ ಲೂಪ್ ರಸ್ತೆ – ಹೆಬ್ಬಾಳ ಔಟರ್ ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ತಲುಪುವುದು.
ಸಂಚಾರಿ ಪೊಲೀಸರು ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ್ದು, ಸೂಚನಾ ಫಲಕಗಳು, ಟ್ರಾಫಿಕ್ ಕೋನ್‌ಗಳು ಹಾಗೂ ಸಿಬ್ಬಂದಿಗಳ ಮೂಲಕ ಮಾರ್ಗದರ್ಶನ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಿ, ಸಹಕರಿಸಿದಲ್ಲಿ ಸಂಚಾರ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
