ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ದದಿಂದ ಭಾರತದಲ್ಲಿ ಭಾರತದಲ್ಲಿ ಭಾರಿ ಪರಿಣಾಮ ಬೀರಿದೆ. ಅದರಲ್ಲೂ ಮುಖ್ಯವಾಗಿ ಹೋಟೆಲ್ ಉದ್ಯಮದ ಮೇಲೆ ಪ್ರಭಾವ ಬೀರಲಾರಂಭಿಸಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದೇಶದಲ್ಲಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತ
ತೈಲ ಮಾರುಕಟ್ಟೆ ಕಂಪನಿಗಳು (OMCs) ಅನಿಲದ ತೀವ್ರ ಅಭಾವದ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ನೀಡಲಾಗುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಸೌದಿ ಅರೇಬಿಯಾದಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವುದು ಮತ್ತು ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯ ಇದಕ್ಕೆ ಪ್ರಮುಖ ಕಾರಣ. ಕೇವಲ ಶನಿವಾರವಷ್ಟೇ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆಯಾಗಿದ್ದು, ಹೋಟೆಲ್ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಹಠಾತ್ ಬೆಳವಣಿಗೆಯಿಂದ ‘ಬೆಂಗಳೂರು ಹೋಟೆಲ್ ಮಾಲೀಕರ ಸಂಘ’ ತೀವ್ರ ಆತಂಕ ವ್ಯಕ್ತಪಡಿಸಿದೆ. ಮುಂದಿನ 70 ದಿನಗಳ ಕಾಲ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತೈಲ ಕಂಪನಿಗಳು ಈ ಹಿಂದೆ ಭರವಸೆ ನೀಡಿದ್ದವು. ಆದರೆ ಈಗ ದಿಢೀರ್ ಆಗಿ ಪೂರೈಕೆ ನಿಲ್ಲಿಸಿದೆ ಎಂದು ಸಂಘದ ಪ್ರತಿನಿಧಿಗಳು ಆಕ್ರೋಶ ಹೊರಹಾಕಿದ್ದಾರೆ. ಗ್ಯಾಸ್ ಪೂರೈಕೆಯಿಲ್ಲದೆ ಹೋಟೆಲ್‌ಗಳನ್ನು ನಡೆಸುವುದು ಅಸಾಧ್ಯವಾಗಿದ್ದು, ಇಂದು (ಮಾರ್ಚ್ 10, 2026) ನಗರದ ಪ್ರಮುಖ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಹೋಟೆಲ್‌ಗಳು ಕೇವಲ ವ್ಯಾಪಾರ ಕೇಂದ್ರಗಳಲ್ಲ, ಅವು ಲಕ್ಷಾಂತರ ಜನರ ಜೀವನಾಡಿ. ಹೋಟೆಲ್ ಆಹಾರವನ್ನೇ ದಿನನಿತ್ಯ ಅವಲಂಬಿಸಿರುವ ಐಟಿ ಉದ್ಯೊಗಸ್ಥರು, ಬ್ಯಾಚುಲರ್‌ಗಳು ಮತ್ತು ವಿದ್ಯಾರ್ಥಿಗಳು, ಪಿಜಿ ಮತ್ತು ಬಾಡಿಗೆ ಮನೆಗಳಲ್ಲಿರುವವರಿಗೆ ಮತ್ತು ನಗರಕ್ಕೆ ಬರುವ ಪ್ರವಾಸಿಗರಿಗೂ ಈ ಮುಷ್ಕರದ ಬಿಸಿ ತಟ್ಟಲಿದೆ.
ಕೇಂದ್ರ ಸರ್ಕಾರದ ಮುಂದಿನ ಹೆಜ್ಜೆ?
ಈ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರ ಸರ್ಕಾರ ಈಗಾಗಲೇ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಆರಂಭಿಸಿದೆ. ಪಶ್ಚಿಮ ಏಷ್ಯಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ, ನಾರ್ವೆ ಮತ್ತು ಯುಎಇ ರಾಷ್ಟ್ರಗಳಿಂದ ತುರ್ತಾಗಿ ಎಲ್‌ಪಿಜಿ ಖರೀದಿಸಲು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಪ್ರಕ್ರಿಯೆಯು ಕಾರ್ಯಗತಗೊಳ್ಳಲು ಕೆಲವು ದಿನಗಳು ಹಿಡಿಯಬಹುದು. ಅಲ್ಲಿಯವರೆಗೆ ಹೋಟೆಲ್ ಉದ್ಯಮ ಈ ಸಂಕಷ್ಟವನ್ನು ಹೇಗೆ ಎದುರಿಸಲಿದೆ ಎಂಬುದೇ ಈಗಿನ ಪ್ರಶ್ನೆ. ಒಟ್ಟಾರೆಯಾಗಿ, ಅಂತರಾಷ್ಟ್ರೀಯ ಮಟ್ಟದ ಯುದ್ಧದ ಭೀತಿ ಬೆಂಗಳೂರಿನ ಹೋಟೆಲ್ ಉದ್ಯಮವನ್ನು ಕಂಗೆಡಿಸಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಶೀಘ್ರ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.