750 ವರ್ಷದ ಹಿಂದಿನ ಗ್ರಂಥವನ್ನು ಪ್ರಧಾನಿ ಮೋದಿಗೆ ಗಿಫ್ಟ್‌‌ ನೀಡಿದ ತೇಜಸ್ವಿ ಸೂರ್ಯ ದಂಪತಿ

122 (1)

ನವದೆಹಲಿ, ಮಾರ್ಚ್ 28: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಖ್ಯಾತ ಕರ್ನಾಟಕ ಶಾಸ್ತ್ರೀಯ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ದಂಪತಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಭೇಟಿಯ ವೇಳೆ ದಂಪತಿಯು ಪ್ರಧಾನಿಗೆ ವಿಶೇಷ ಉಡುಗೊರೆಯನ್ನೂ ನೀಡಿದರು. ಮಧ್ವಾಚಾರ್ಯರು ರಚಿಸಿದ, ಸುಮಾರು 750 ವರ್ಷಗಳ ಹಿಂದಿನ ಪವಿತ್ರ ‘ಸರ್ವಮೂಲ’ ಗ್ರಂಥವನ್ನು ಉಡುಗೊರೆಯಾಗಿ ಪ್ರಧಾನಿ ಮೋದಿಗೆ ನೀಡಿದರು.

ಈ ಗ್ರಂಥವು ಅತ್ಯಂತ ಪುರಾತನವಾಗಿದ್ದು, ಅದನ್ನು ನೂತನ ತಂತ್ರಜ್ಞಾನದ ನೆರವಿನಿಂದ ಸಂರಕ್ಷಿಸಲಾಗಿದೆ ಎಂಬುದೇ ಇದರ ವಿಶೇಷತೆ. ಸಂಸ್ಕೃತ ಸಾಹಿತ್ಯ ಮತ್ತು ತತ್ವಚಿಂತನದಲ್ಲಿ ಅಪ್ರತಿಮವಾದ ಈ ‘ಸರ್ವಮೂಲ’ ಗ್ರಂಥವನ್ನು ಎನ್.ಜಿ.ಓ ತಾರಾ ಪ್ರಕಾಶನ ಸಂಸ್ಥೆಯು ವಿಜ್ಞಾನಸಹಿತ ತಂತ್ರಜ್ಞಾನವನ್ನು ಬಳಸಿ ಸಂರಕ್ಷಿಸಿದೆ. ಈ ಗ್ರಂಥ ಸಂರಕ್ಷಣೆಗೆ ವಾಟರ್‌ ಪ್ರೂಫ್, ಫೈರ್‌ ಪ್ರೂಫ್ ತಂತ್ರಜ್ಞಾನ ಬಳಸಲಾಗಿದ್ದು, ಮುಂದಿನ ಹಲವು ಶತಮಾನಗಳವರೆಗೂ ಇದನ್ನು ಉಳಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ತೇಜಸ್ವಿ ಸೂರ್ಯ ಅವರು ಈ ಗ್ರಂಥದ ವೈಶಿಷ್ಟ್ಯಗಳು ಹಾಗೂ ಸಂರಕ್ಷಣಾ ವಿಧಾನವನ್ನು ಪ್ರಧಾನಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ದಂಪತಿಯ ಮದುವೆ ಸಮಾರಂಭದ ಫೋಟೋಗಳನ್ನು ಈಗಾಗಲೇ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ನಂತರ ತೇಜಸ್ವಿ ಸೂರ್ಯ ಅವರ ಕೈಯಿಂದ ಪವಿತ್ರ ಗ್ರಂಥವನ್ನು ಉಡುಗೊರೆಯಾಗಿ ಪಡೆಯುವುದು ವಿಶೇಷ ಅನಿಸಿತು ಎಂದು ಮೆಚ್ಚುಗೆ ಸೂಚಿಸಿದರು.

ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರವು ಭಾರತದಲ್ಲಿ ಜ್ಞಾನ, ಸಂಸ್ಕೃತಿ, ಪುರಾತನ ಗ್ರಂಥಗಳ ಸಂರಕ್ಷಣೆಗಾಗಿ ‘ಜ್ಞಾನಭಾರತಿ ಮಿಷನ್’ ಅನ್ನು ಆರಂಭಿಸಿದ್ದು, ಅದರಡಿಯಲ್ಲಿ ಬಜೆಟ್‌ನಲ್ಲಿ ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ತೇಜಸ್ವಿ ಸೂರ್ಯ ದಂಪತಿಯ ಈ ಉಡುಗೊರೆ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ತೋರಿಸುವುದು ಮಾತ್ರವಲ್ಲ, ಸಂಸ್ಕೃತಿಯ ಉಳಿವಿಗೆ ಹೊಸ ಶಕ್ತಿಯನ್ನು ನೀಡುವ ನಿಟ್ಟಿನಲ್ಲಿ ಉದಾಹರಣೆಯಾಗಿದೆ.

Exit mobile version