ಬೆಂಗಳೂರು: ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಬೈದರೆಂಬ ಕಾರಣಕ್ಕೆ ಮನನೊಂದ 8ನೇ ತರಗತಿಯ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಧುಶ್ರೀ ಎಂಬ 8ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಆಕೆಯು ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು.
ಘಟನೆಯ ವಿವರ
ಕಳೆದ ರಾತ್ರಿ ಮನೆಯಲ್ಲಿದ್ದಾಗ ಬಾಲಕಿ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗ್ಗೆ ಪೋಷಕರು ಎದ್ದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಮಗಳ ಈ ಸ್ಥಿತಿಯನ್ನು ನೋಡಿದ ಕೂಡಲೇ ಆಕೆಯ ತಂದೆ-ತಾಯಿ ಆಘಾತಕ್ಕೊಳಗಾಗಿದ್ದು, ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ಘಟನಾ ಸ್ಥಳದಲ್ಲಿ ಬಾಲಕಿ ಬರೆದ ಡೆತ್‌ನೋಟ್ (Death Note) ಕೂಡ ಪತ್ತೆಯಾಗಿದೆ. ಆ ಪತ್ರದಲ್ಲಿ ಆಕೆ ತನ್ನ ಮನಸ್ಸಿನ ಮಾತು ಬರೆದುಕೊಂಡಿದ್ದು, “ಶಾಲೆಯಲ್ಲಿ ನಡೆದ ಘಟನೆ ನನಗೆ ತುಂಬಾ ನೋವು ತಂದಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಅವಮಾನವನ್ನು ಸಹಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬಾಲಕಿ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.
ತನ್ನ ಕುಟುಂಬದ ಬಗ್ಗೆ ಅಪಾರ ಪ್ರೀತಿ ವ್ಯಕ್ತಪಡಿಸಿರುವ ಆಕೆ, ‘ಅಮ್ಮ, ಅಕ್ಕ, ತಂಗಿ, ತಮ್ಮ ಯಾರದ್ದೂ ತಪ್ಪಿಲ್ಲ. ನನ್ನ ಅಮ್ಮನನ್ನು ಯಾರು ಕೂಡ ಬೈಯ್ಯಬೇಡಿ. ಎಲ್ಲರೂ ನನ್ನನ್ನು ಕ್ಷಮಿಸಿ. ನನಗೆ ಈ ಭೂಮಿ ಮೇಲೆ ಬದುಕುವ ಅರ್ಹತೆ ಇಲ್ಲ’ ಎಂದು ತನ್ನ ಕುಟುಂಬದವರನ್ನು ಕಾಳಜಿ ವಹಿಸುವಂತೆ ಮತ್ತು ಯಾರನ್ನೂ ದೂಷಿಸದಂತೆ ವಿನಂತಿಸಿದ್ದಾಳೆ. ತನ್ನ ನಿರ್ಧಾರವು ತಾಯಿ ಅಥವಾ ಕುಟುಂಬದವರ ತಪ್ಪಲ್ಲ ಎಂದು ಅವಳು ಡೆತ್‌ನೋಟ್‌ನಲ್ಲಿ ಸ್ವಷ್ಟಪಡಿಸಿದ್ದಾಳೆ.
ಪೊಲೀಸ್ ತನಿಖೆ
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್ ಅನ್ನು ವಶಕ್ಕೆ ಪಡೆದ ಪೊಲೀಸರು ಅವಳ ಶಾಲೆಯ ಶಿಕ್ಷಕರು ಮತ್ತು ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶಾಲೆಯಲ್ಲಿ ಆಕೆ ಎದುರಿಸಿದ ಘಟನೆಯೇನು, ಶಿಕ್ಷಕಿ ಬೈದಿದ್ದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ದಾಖಲು
ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ, ಡೆತ್‌ನೋಟ್ ಸೇರಿದಂತೆ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಶವಪರೀಕ್ಷೆಯನ್ನು ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.
