ದೇಶದ ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಿಬಿಐ ಹೆಗಲಿಗೆ: ಸುಪ್ರೀಂ ಕೋರ್ಟ್‌ ಆದೇಶ

Untitled design 2025 12 01T174455.225

ನವದೆಹಲಿ: ದೇಶದಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ (Digital Arrest) ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬೃಹತ್‌ ಆದೇಶ ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿರುವ ಈ ರೀತಿಯ ಎಲ್ಲಾ ಎಫ್‌ಐಆರ್‌ಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸುವಂತೆ ಆದೇಶಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Suo Moto PIL) ವಿಚಾರಣೆ ನಡೆಸಿ ಈ ಐತಿಹಾಸಿಕ ಆದೇಶ ಹೊರಡಿಸಿದೆ. ಈ ವಂಚನೆಯು ಪ್ಯಾನ್-ಇಂಡಿಯಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಗಡಿಯಾಚೆಗಿನ ದೇಶಗಳೊಂದಿಗೆ ಸಂಪರ್ಕವಿರುವುದರಿಂದ ಏಕರೂಪದ ಕೇಂದ್ರೀಕೃತ ತನಿಖೆಯೇ ಅಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕೋರ್ಟ್ ಆದೇಶದ ಮುಖ್ಯಾಂಶಗಳು:

ನ್ಯಾಯಾಲಯವು ವಂಚಕರು ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳು, ಫೇಕ್ ವೀಡಿಯೊ ಕಾಲ್‌ಗಳ ಮೂಲಕ ಜನರನ್ನು ಬೆದರಿಕೆಗೊಳಪಡಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಇದೊಂದು ಸಂಘಟಿತ ಅಂತಾರಾಷ್ಟ್ರೀಯ ಜಾಲ. ಇದನ್ನು ಒಡೆಯಲು ಸಿಬಿಐ ಮಾತ್ರ ಸಮರ್ಥ ಎಂದು ಪೀಠ ತಿಳಿಸಿದೆ.

ಕಳೆದ ವಿಚಾರಣೆಯಲ್ಲಿ ಸಿಬಿಐ ಬಳಿ ಸಾಕಷ್ಟು ಸಂಪನ್ಮೂಲಗಳಿವೆಯೇ ಎಂದು ಕೋರ್ಟ್ ಪ್ರಶ್ನಿಸಿತ್ತು ಇದಕ್ಕೆ ಪ್ರತಿಕ್ರಿಯಿಸಿದ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸಿಬಿಐ ಈಗಾಗಲೇ ಹಲವು ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ತನಿಖೆ ಮಾಡುತ್ತಿದೆ. ಎಲ್ಲಾ ಪ್ರಕರಣಗಳನ್ನೂ ನಿರ್ವಹಿಸಲು ಸಿದ್ಧವಿದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ ಅವರು ಅಗತ್ಯವಿದ್ದರೆ ಸಿಬಿಐಗೆ ಹೆಚ್ಚುವರಿ ಸಿಬ್ಬಂದಿ ಮತ್ತು ಸಂಪನ್ಮೂಲ ನೀಡಲು ಕೇಂದ್ರ ಸಿದ್ಧವಿರಲಿ ಎಂದು ಸೂಚಿಸಿದ್ದರು.

ಡಿಜಿಟಲ್ ಅರೆಸ್ಟ್ ಎಂದರೇನು?

ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸಾವಿರಾರು ಜನರು ಬಲಿಯಾಗುತ್ತಿರುವ “ಡಿಜಿಟಲ್ ಅರೆಸ್ಟ್” ಎಂಬುದು ಸೈಬರ್ ವಂಚಕರ ಅತ್ಯಂತ ಭಯಾನಕ ಹಾಗೂ ಸಂಘಟಿತ ತಂತ್ರ. ಇದು ಸಾಮಾನ್ಯ ಫಿಶಿಂಗ್ ಅಥವಾ ಒಟಿಪಿ ಹಗರಣಕ್ಕಿಂತಲೂ ಭಯಾನಕವಾದದ್ದು, ಏಕೆಂದರೆ ಇದರಲ್ಲಿ ಗಂಟೆಗಳ ಕಾಲ ಮಾನಸಿಕ ಒತ್ತಡ ಹೇರಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತದೆ.

ಡಿಜಿಟಲ್ ಅರೆಸ್ಟ್ ಹೇಗೆ ನಡೆಯುತ್ತದೆ?
  1. ಅಧಿಕಾರಿಗಳೆಂದು ಸುಳ್ಳು ಕರೆ: ವಂಚಕರು ಸಿಬಿಐ, ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಆದಾಯ ತೆರಿಗೆ ಇಲಾಖೆ ಅಥವಾ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವೀಡಿಯೊ ಕಾಲ್ ಮಾಡುತ್ತಾರೆ. ಕರೆಯ ಸಮಯದಲ್ಲಿ ಅವರು ಒಂದೇ ರೀತಿಯ ಯೂನಿಫಾರ್ಮ್ ಧರಿಸಿರುತ್ತಾರೆ, ಹಿನ್ನೆಲೆಯಲ್ಲಿ ಸಿಬಿಐ/ಪೊಲೀಸ್ ಕಚೇರಿಯ ಫೋಟೋ ಇರಿಸಿರುತ್ತಾರೆ.
  2. ಸುಳ್ಳು ಆರೋಪ: ನಿಮ್ಮ ಹೆಸರಿನಲ್ಲಿ ದೇಶದ್ರೋಹ, ಹಣ ಅಕ್ರಮ ವರ್ಗಾವಣೆ, ಡ್ರಗ್ಸ್ ಸಾಗಾಟ, ಮಕ್ಕಳ ಪೋರ್ನೋಗ್ರಫಿ ಕೇಸ್ ದಾಖಲಾಗಿದೆ. ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆ, ನಿಮ್ಮ ಬ್ಯಾಂಕ್ ಖಾತೆಯಿಂದ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿದೆ ಎಂದು ಗಂಭೀರ ಆರೋಪ ಮಾಡುತ್ತಾರೆ.
  3. ನಕಲಿ ದಾಖಲೆಗಳ ಪ್ರದರ್ಶನ: ನಕಲಿ ಬಂಧನ ವಾರಂಟ್, ಎಫ್‌ಐಆರ್ ಕಾಪಿ, ಕೋರ್ಟ್ ನೋಟಿಸ್, ನಿಮ್ಮ ಆಧಾರ್/ಪಾನ್ ಕಾರ್ಡ್ ಫೋಟೋ ತೋರಿಸುತ್ತಾರೆ. ಇವೆಲ್ಲವೂ ಫೋಟೋಶಾಪ್‌ನಲ್ಲಿ ತಯಾರಿಸಿದ ನಕಲಿ ದಾಖಲೆಗಳು.
  4. ತಕ್ಷಣ ಬಂಧನದ ಬೆದರಿಕೆ: ನೀವು ಈಗಲೇ ಬಂಧನಕ್ಕೊಳಗಾಗುತ್ತೀರಿ. ಮನೆಯಿಂದ ಹೊರಗೆ ಬಂದರೆ ಪೊಲೀಸ್ ತಂಡ ಬಂದು ಬಂಧಿಸುತ್ತದೆ. ಮಕ್ಕಳು ಶಾಲೆಯಲ್ಲಿದ್ದರೆ ಅಲ್ಲಿಗೂ ಪೊಲೀಸ್ ತೆರಳುತ್ತಾರೆ ಎಂದು ಭಯ ಹುಟ್ಟಿಸುತ್ತಾರೆ
  5. ಡಿಜಿಟಲ್ ಒತ್ತೆಯಾಳು: ಬಂಧನ ತಪ್ಪಿಸಬೇಕಾದರೆ ಈಗಲೇ ಹಣ ವರ್ಗಾಯಿಸಿ ಅಥವಾ ಗಿಫ್ಟ್ ಕಾರ್ಡ್, ಕ್ರಿಪ್ಟೋ ಕರೆನ್ಸಿ ಕಳುಹಿಸಿ ಎಂದು ಒತ್ತಾಯ ಮಾಡುತ್ತಾರೆ. ವೀಡಿಯೊ ಕಾಲ್ ಕಟ್ ಮಾಡದಂತೆ ಗಂಟೆಗಳ ಕಾಲ ಆನ್‌ಲೈನ್‌ನಲ್ಲೇ ಇರಿಸುತ್ತಾರೆ.

 

Exit mobile version