ಬೆಳಗಾವಿ, ಏಪ್ರಿಲ್ 19: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿರುವಾಗ, ಉತ್ತರಪತ್ರಿಕೆಗಳಲ್ಲಿ ಪತ್ತೆಯಾದ ವಿಚಿತ್ರ ಹಾಗೂ ಮನವಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ವಿಶೇಷವಾಗಿ ಕೆಲ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡುವ ಬದಲು, ಅಧಿಕಾರಿಗಳನ್ನು ಮನವೊಲಿಸುವ ವಿಭಿನ್ನ ರೀತಿಯ ಮನವಿ ಮಾಡಿರುವುದು ಗಮನ ಸೆಳೆದಿದೆ. “ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಳು”, “ಪ್ಲೀಸ್ ಪಾಸ್ ಮಾಡಿ, ನನ್ನ ಲವ್ ನಿಮ್ಮ ಕೈಯಲ್ಲಿದೆ” ಎಂಬಂತಹ ಮಾತುಗಳು ಉತ್ತರ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿವೆ.
ಮತ್ತೊಂದು ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬನು ಐದು ನೂರು ರೂಪಾಯಿ ನೋಟನ್ನು ಉತ್ತರಪತ್ರಿಕೆಗೆ ಅಂಟಿಸಿ, “ಇದು ನೀವು ಚಹಾ ಕುಡಿಯೋಕೆ ಸರ್, ನನ್ನ ಪಾಸ್ ಮಾಡಿ” ಎಂದು ಬರೆದು ಮನವಿ ಮಾಡಿರುವುದು ಪತ್ತೆಯಾಗಿದೆ.
ಇನ್ನೊಬ್ಬ ವಿದ್ಯಾರ್ಥಿ , “ನನ್ನನ್ನು ಪಾಸ್ ಮಾಡದಿದ್ದರೆ, ನನ್ನ ಅಪ್ಪ- ಅಮ್ಮ ಮುಂದೆ ನನ್ನನ್ನು ಕಾಲೇಜಿಗೆ ಕಳುಹಿಸೋದಿಲ್ಲ”, “ಪ್ಲೀಸ್ ಮಿಸ್ ಅಂಡ್ ಸರ್, ನನ್ನನ್ನು ಪಾಸ್ ಮಾಡಿ” ಎಂದು ಬರೆದು ಮನವಿ ಮಾಡಿಕೊಂಡಿದ್ದಾನೆ.
