ಧರ್ಮಸ್ಥಳ ಬುರುಡೆ ಪ್ರಕರಣ: ಮಹೇಶ್ ತಿಮರೋಡಿ ಅರೆಸ್ಟ್ ಆಗೋದು ಬಹುತೇಕ ಖಚಿತ

Untitled design 2025 08 26t110427.993

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದ ಬುರುಡೆ ಪ್ರಕರಣವು ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ತಂಡ ತಿಮರೋಡಿಯ ಮನೆಯ ಮೇಲೆ ದಾಳಿ ನಡೆಸಿ, ಚಿನ್ನಯ್ಯನ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದೆ.

ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಲಗೇಜ್‌ ಮತ್ತು ಮೊಬೈಲ್‌ ಪತ್ತೆ

ಉಜಿರೆಯ ತಿಮರೋಡಿಯ ಮನೆಯ ಮೇಲೆ ಎಸ್‌ಐಟಿ ತಂಡವು ಬೆಳಗ್ಗೆ ಜಾವದಲ್ಲಿ ದಾಳಿ ನಡೆಸಿತ್ತು. ಈ ವೇಳೆ ಚಿನ್ನಯ್ಯನ ಒಂದು ಆಂಡ್ರಾಯ್ಡ್ ಮೊಬೈಲ್, ಬಟ್ಟೆಗಳು ಮತ್ತು ಲಗೇಜ್ ಬ್ಯಾಗ್‌ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದೆ. ಆರಂಭದಲ್ಲಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದ ಚಿನ್ನಯ್ಯ, ತಿಮರೋಡಿಯ ಮನೆಯಲ್ಲೇ ಆಶ್ರಯ ಪಡೆದಿದ್ದ.

ಎಸ್‌ಐಟಿ ವಿಚಾರಣೆಯ ಸಂದರ್ಭದಲ್ಲೂ ಚಿನ್ನಯ್ಯ, ತಿಮರೋಡಿಯ ಮನೆಯ ಒಂದು ಕೊಠಡಿಯಲ್ಲಿ ಇದ್ದ,  ತಿಮರೋಡಿಯು ಚಿನ್ನಯ್ಯಗೆ ಪ್ರತ್ಯೇಕ ಕೊಠಡಿಯನ್ನು ಒದಗಿಸಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿಯ ಜೆಎಂಎಫ್‌ಸಿ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದ ಎಸ್‌ಐಟಿ, ಚಿನ್ನಯ್ಯನ ಹೇಳಿಕೆಯ ಆಧಾರದ ಮೇಲೆ ಈ ದಾಳಿಯನ್ನು ನಡೆಸಿತ್ತು.

ತಿಮರೋಡಿಯ ಬಂಧನ ಸಾಧ್ಯತೆ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ತಿಮರೋಡಿಯನ್ನು ಎರಡನೇ ಆರೋಪಿಯಾಗಿ ಗುರುತಿಸಲಾಗಿದೆ. ಚಿನ್ನಯ್ಯಗೆ ಆಶ್ರಯ, ಹಣಕಾಸಿನ ನೆರವು ಮತ್ತು ತರಬೇತಿ ನೀಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯ ಬಂಧನ ಬಹುತೇಕ ಖಚಿತವಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ತಿಮರೋಡಿ, ಈಗ ಮತ್ತೊಂದು ಪ್ರಕರಣದಲ್ಲಿ ಬಂಧನದ ಆತಂಕವನ್ನು ಎದುರಿಸುತ್ತಿದ್ದಾನೆ. ಚಿನ್ನಯ್ಯನಿಗೆ ಹೇಳಿಕೆ ನೀಡಲು ಸಮಗ್ರ ತರಬೇತಿ ನೀಡಿದ್ದು ತಿಮರೋಡಿಯೇ ಎಂಬ ಆರೋಪವಿದೆ.

ಚಿನ್ನಯ್ಯನನ್ನು ಮಾನಸಿಕವಾಗಿ ಸಜ್ಜುಗೊಳಿಸಿ, ಹಣಕಾಸಿನ ನೆರವು ನೀಡಿದ ಆರೋಪ ತಿಮರೋಡಿ ಮೇಲಿದೆ. ತಿಮರೋಡಿಯ ಮನೆಯಲ್ಲಿ ಪ್ರತಿನಿತ್ಯ 50ಕ್ಕೂ ಹೆಚ್ಚು ಬೆಂಬಲಿಗರು ಜಮಾಯಿಸುತ್ತಿದ್ದರು. ಚಿನ್ನಯ್ಯಗೆ ಓಡಾಡಲು ಗಿರೀಶ್ ಮಟ್ಟಣ್ಣವರ್ ತನ್ನ ಕಾರನ್ನು ಒದಗಿಸಿದ್ದ, ಮತ್ತು ದೂರು ದಾಖಲಾದ ನಂತರವೂ ಚಿನ್ನಯ್ಯ ತಿಮರೋಡಿಯ ಮನೆಗೆ ದೈನಂದಿನ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಎಸ್‌ಐಟಿಯು ಚಿನ್ನಯ್ಯನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ. ಚಿನ್ನಯ್ಯ ತಿಮರೋಡಿಯ ಜೊತೆಗೆ ಇತರ ನಾಲ್ವರ ವಿರುದ್ಧವೂ ಹೇಳಿಕೆ ನೀಡಿದ್ದಾನೆ. ಈ ನಾಲ್ವರು ಯಾರೆಂಬುದರ ಬಗ್ಗೆ ಎಸ್‌ಐಟಿಯು ತೀವ್ರ ತನಿಖೆ ನಡೆಸುತ್ತಿದೆ. ತಿಮರೋಡಿಯ ಹಿಂದಿನ ಕಾಣದ ಕೈಗಳ ಬಗ್ಗೆಯೂ ತನಿಖೆ ಚುರುಕುಗೊಂಡಿದೆ. ಈ ದಾಳಿಯಿಂದ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಲು ಎಸ್‌ಐಟಿಯು ಪ್ರಯತ್ನಿಸುತ್ತಿದೆ.

Exit mobile version